ಗೋಕಾಕ ತಾಲ್ಲೂಕಿನ ಕೊಳವಿ ʼನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯʼ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನವೀಕೃತ ಶಾಲಾ ಕಟ್ಟಡವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ಚಿತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮತ್ತಿತರರು ಇದ್ದಾರೆ.
ಗೋಕಾಕ: ಶಾಸಕನಾಗಿ ನನಗೆ ಅತ್ಯಂತ ಪ್ರೀತಿಯ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ನೀರಾವರಿ ಇಲಾಖೆಗಳಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದು 27 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತೀದ್ದೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ತಾಲ್ಲೂಕಿನ ಕೊಳವಿ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಶಾಲಾ ಕಟ್ಟಡದ ಉದ್ಘಾಟನೆ ಮತ್ತು ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ನವೀಕೃತ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರು ಪ್ರಜ್ಞಾವಂತರಾದರೆ ಏನೆಲ್ಲಾ ಪಡೆಯಲು ಸಾಧ್ಯವಿದೆ. ಮುಂದಿನ ದಿನ ಮಾನಗಳಲ್ಲಿ ಕೊಳವಿ ಶಾಲೆಗೆ ಅಗತ್ಯ ಸರ್ಕಾರಿ ನೆರವು ತರಲು ಬದ್ಧನಾಗಿದ್ದೇನೆ ಎಂದು ಅಭಯ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಸದ ಜಗದೀಶ ಶೆಟ್ಟರ್ ಅವರು ಶಾಲೆಯ ಶತಮಾನೋತ್ಸವ ಆಚರಣೆಯ ಸವಿನೆನಪಿಗಾಗಿ ಸ್ಥಾಪಿಸಿದ್ದ ಸ್ಮಾರಕದ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದು ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಇಂತಹ ಸಂಭ್ರಮದಲ್ಲಿ ನನಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ ಕೊಳವಿ ಗ್ರಾಮಸ್ಥರ ನಿರ್ಧಾರದಿಂದ ನಾನು ಚಕಿತನಾಗಿದ್ದೇನೆ ಎಂದರು.
ಗ್ರಾಮೀಣ ಪ್ರತಿಭೆಗಳು ಇಲ್ಲಿ ಬೆಳೆದು ದೇಶ-ವಿದೇಶಗಳಲ್ಲಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿ ಹುಟ್ಟಿದ ಊರಿನ ಕೀರ್ತಿಯನ್ನು ಬೆಳಗಿಸುವಂತೆ ಆಶಿಸಿದ ಅವರು, ಗ್ರಾಮೀಣ ಸರ್ಕಾರಿ ಶಾಲೆ ಮಕ್ಕಳು ಪದೋನ್ನತಿ ಹೊಂದಿ ಸೇವೆಯ ಉತ್ತುಂಗವನ್ನು ತಲುಪಿದಾಗ ಜನ್ಮ ನೀಡಿದ ತಂದೆ-ತಾಯಿ ಮತ್ತು ಹುಟ್ಟಿದ ಊರನ್ನು ಮರೆಯ ಕೂಡದು ಎಂದರು.
ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರು ಮಾತನಾಡಿದರು.
ವೇದಿಕೆಯನ್ನು ಅಲಂಕರಿಸಿದ್ದ ಅತಿಥಿ ಮಹೋದಯರು 1955ರಲ್ಲಿ ಕೊಳವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶ್ರೇಯಸ್ಸಿಗಾಗಿ ಶ್ರಮಿಸಿದ ಮಹಾ ಪೋಷಕರಾದ ಬಾಳಪ್ಪ ರುದ್ರಪ್ಪ ಅಂಗಡಿ, ಶಾಲೆಯ ಆದರ್ಶ ಪ್ರಧಾನ ಗುರುಗಳಾಗಿದ್ದ ಮ.ಬಾ.ಹಟ್ಟಿಗೌಡರ, ಶಾಲಾ ಕಟ್ಟಡ ಸ್ವಾಗತ ಸಮಿತಿ ಅಧ್ಯಕ್ಷ ಬಾಳಗೌಡ ರಾಮಗೌಡ ಪಾಟೀಲ ಈ ಮೂವರು ಸ್ವಾತಂತ್ರ್ಯ ಯೋಧರೊಂದಿಗೆ ಅಸಂಖ್ಯ ಮಹನೀಯರ ಶ್ರಮ ಸ್ಮರಿಸಿದರು.
ಅಧ್ಯಕ್ಷತೆಯನ್ನು ಕೊಳವಿ ಗ್ರಾ.ಪಂ. ಅಧ್ಯಕ್ಷ ಕರೆಪ್ಪ ಬಡಿಗವಾಡ ವಹಿಸಿದ್ದರು. ಸಾನಿಧ್ಯ ವಹಿಸಿದ್ದ ಅಂಕಲಗಿ– ಕುಂದರಗಿಯ ಅಡವಿ ಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕೊಳವಿ ಗ್ರಾಮದ ಹುಲಕಂತಿಮಠ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ ಡಾ. ಮೋಹನ ಭಸ್ಮೆ, ತಾ.ಪಂ. ಇಒ ಘಸ್ತಿ ಮೊದಲಾದವರು ಪಾಲ್ಗೊಂಡಿದ್ದರು. ಬಿಇಒ ಜಿ.ಬಿ.ಬಳಗಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಭಾರತ ಸೇವಾದಳ ರಾಜ್ಯ ಮಾಜಿ ದಳಪತಿ ಬಸವರಾಜ ಹಟ್ಟಿಗೌಡರ, ಸಂಕೇಶ್ವರ ಎಸ್.ಡಿ. ಪ್ರೌಢಶಾಲೆಯ ನಿವೃತ್ ಶಿಕ್ಷಕ ಬಿ.ಕೆ.ಯರಗಟ್ಟಿ, ನಿವೃತ್ತ ಕರ್ನಲ್ ವಿಠ್ಠಲ ಭುಜನ್ನವರ, ಗೋಕಾಕ ಚಿಕ್ಕ ಮಕ್ಕಳ ತಜ್ಞ ಡಾ. ಆರ್.ಡಿ.ಪಾಟೀಲ ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಿಂದ ಶೈಕ್ಷಣಿಕ ಜಾತ್ರೆಯ ಸಂಭ್ರಮ ಮೂಡಿತ್ತು. ಬಾಳೇಶ ಮಾರಿಹಾಳ ನಿರೂಪಿಸಿದರು. ಬಾಳಯ್ಯ ಪೂಜಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.