ADVERTISEMENT

ಕೊಲ್ಹಾಪುರ ಚಪ್ಪಲಿ: ‘ಪ್ರಾಡಾ’ ತಪ್ಪೊಪ್ಪಿಗೆ; ಪಾರಂಪರಿಕ ಪಾದರಕ್ಷೆಗಳಿಗೆ ಮಣೆ

ಅಥಣಿಯ ಲಿಡ್ಕರ್‌ ಕಾಲೊನಿಗೆ ಭೇಟಿ ನೀಡಿದ ಪ್ರಾಡಾ ಕಂಪನಿ ಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 4:43 IST
Last Updated 31 ಅಕ್ಟೋಬರ್ 2025, 4:43 IST
<div class="paragraphs"><p>ಅಥಣಿಯ ಲಿಡ್ಕರ್‌ ಕಾಲೊನಿಗೆ ಬುಧವಾರ ಭೇಟಿ ನೀಡಿದ ಪ್ರಾಡಾ ಕಂಪನಿಯ ಪಾವೊಲೊ ಟೆವೆರಾನ್, ಡ್ಯಾನಿಯಲ್‌ ಕಾಂಟು, ರಾಬರ್ಟೊ ಪೊಲ್ಲಾಸ್ಟ್ರೆಲ್ಲಿ ಅವರು ಕೊಲ್ಹಾಪುರಿ ಪಾದರಕ್ಷೆಗಳನ್ನು ಪರಿಶೀಲಿಸಿದರು.</p></div>

ಅಥಣಿಯ ಲಿಡ್ಕರ್‌ ಕಾಲೊನಿಗೆ ಬುಧವಾರ ಭೇಟಿ ನೀಡಿದ ಪ್ರಾಡಾ ಕಂಪನಿಯ ಪಾವೊಲೊ ಟೆವೆರಾನ್, ಡ್ಯಾನಿಯಲ್‌ ಕಾಂಟು, ರಾಬರ್ಟೊ ಪೊಲ್ಲಾಸ್ಟ್ರೆಲ್ಲಿ ಅವರು ಕೊಲ್ಹಾಪುರಿ ಪಾದರಕ್ಷೆಗಳನ್ನು ಪರಿಶೀಲಿಸಿದರು.

   

ಅಥಣಿ (ಬೆಳಗಾವಿ ಜಿಲ್ಲೆ): ಕೊಲ್ಹಾಪುರಿ ಪಾದರಕ್ಷೆಗಳನ್ನು ನಕಲು ಮಾಡಿ, ತನ್ನದೇ ಬ್ರ್ಯಾಂಡ್‌ ಎಂದು ಬಿಂಬಿಸಿದ್ದ ಇಟಲಿಯ ಪ್ರಾಡಾ (PRADA) ಕಂಪನಿ ಸತ್ಯಾಂಶ ಒಪ್ಪಿಕೊಂಡಿದೆ. ಅಥಣಿ ತಾಲ್ಲೂಕಿನ ಚರ್ಮ ಕುಶಲಕರ್ಮಿಗಳು ತಯಾರಿಸುವ ಅಂತರರಾಷ್ಟ್ರೀಯ ಗುಣಮಟ್ಟ ಪಾದರಕ್ಷೆಗಳನ್ನು ಖರೀದಿಸಲು ಮುಂದೆ ಬಂದಿದೆ.

‘ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಜಿಐ ಟ್ಯಾಗ್‌ ಹೊಂದಿರುವ ಕೊಲ್ಹಾಪುರಿ ಚಪ್ಪಲಿಗಳನ್ನು ಪ್ರಾಡಾ ಕಂಪನಿ ನಕಲು ಮಾಡಿ, ಮಾರುತಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು (ಲಿಡ್ಕರ್‌) ಕಾನೂನು ಹೋರಾಟ ಪ್ರಾರಂಭಿಸಿತ್ತು. ಇದೀಗ ಹೋರಾಟಕ್ಕೆ ಜಯ ಸಂದಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ವಸುಂಧರಾ ತಿಳಿಸಿದ್ದಾರೆ.

ADVERTISEMENT

ಈ ವಿಚಾರವಾಗಿ ಪ್ರಾಡಾ ಕಂಪನಿ ಅಧಿಕಾರಿಗಳ ಜತೆಗೆ ಹಲವಾರು ಸುತ್ತಿನ ಮಾತುಕತೆ ನಡೆಸಲಾಯಿತು. ಪರಿಣಾಮ, ಕಂಪನಿಯ ತಾಂತ್ರಿಕ ನಿಪುಣರು ಮತ್ತು ಮುಖ್ಯ ವಿನ್ಯಾಸಕಾರರಾದ ಪಾವೊಲೊ ಟೆವೆರಾನ್, ಡ್ಯಾನಿಯಲ್‌ ಕಾಂಟು, ರಾಬರ್ಟೊ ಪೊಲ್ಲಾಸ್ಟ್ರೆಲ್ಲಿ ಅವರ ತಂಡವು ಅಕ್ಟೋಬರ್ 29ರಂದು ಅಥಣಿಗೆ ಬಂದು, ಇಲ್ಲಿನ ಪಾರಂಪರಿಕ ಪಾದರಕ್ಷೆಗಳನ್ನು ಪರಿಶೀಲಿಸಿತು. ಜತೆಗೆ ಲಿಡ್ಕರ್‌ ಕಾಲೊನಿಗೆ ಭೇಟಿ ನೀಡಿ ಮುಖಾಮುಖಿ ಚರ್ಚೆ ನಡೆಸಿತು.

ಲಿಡ್ಕಕರ್‌ನ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ವಸುಂಧರಾ, ಪ್ರಾಡಾ ಕಂಪನಿಯ ಭಾರತೀಯ ಪ್ರತಿನಿಧಿ ಗೌತಮ್‌ ಮೆಹ್ರ, ಅಥಣಿಯ ಚರ್ಮ ಕುಶಲರ್ಮಿಗಳ ಪ್ರತಿನಿಧಿ ಶಿವರಾಜ್‌ ಸೌದಾಗರ ಮತ್ತು ಮನ್ಮಥ ಅವರು ಈ ಮುಖಾಮುಖಿ ಚರ್ಚೆಯಲ್ಲಿ ಪಾಲ್ಗೊಂಡರು.

ಕೊಲ್ಹಾಪುರಿ ಪಾದರಕ್ಷೆ ತಯಾರಿಕೆಯ ತಾಂತ್ರಿಕ ಕೌಶಲ ಪಡೆಯಲು ಇದೇ ನವೆಂಬರ್‌ನಲ್ಲಿ ಆಗ್ರಾದಲ್ಲಿ ಪ್ರಾಡಾ ಕಂಪನಿ ವತಿಯಿಂದ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲೂ ನಿರ್ಧರಿಸಲಾಗಿದೆ. ಅಥಣಿಯ ಪ್ರಮುಖ ಚರ್ಮ ಕುಶಲಕರ್ಮಿಗಳಾದ ಸಂತೋಷ ವಿಲಾಸ ಹೊನಕಂದೆ, ಮಲ್ಲೇಶ ಕೃಷ್ಣ ಸಣ್ಣಕ್ಕಿ, ಮಚ್ಚೇಂದ್ರ ಗಂಗರಾಮ ಕಾಂಬಳೆ, ಸುರೇಶ ನಾಮದೇವ ಶಿಂಧೆ, ದಶರಥ ತೋರಪ್ಪ ಯಲಮಲ್ಲೆ ಹಾಗೂ ರಾಕೇಶ ಶ್ರೀಕಾಂತ ರಜೆಂಗಲೆ ಅವರು ಈ ತರಬೇತಿಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.

ಕೊಲ್ಹಾಪುರಿ ಪಾದರಕ್ಷೆ ತಯಾರಿಕೆಯ ಅಸ್ತಿತ್ವ ಸಾಬೀತುಪಡಿಸಿ, ಪಾರಂಪರಿಕ ಜ್ಞಾನ ಹಾಗೂ ಕೌಶಲಕ್ಕೆ ಜಾಗತಿಕ ಮನ್ನಣೆ ದೊರೆಕಿಸಿಕೊಡುವಲ್ಲಿ ನಿಗಮವು ಯಶಸ್ವಿಯಾಗಿದೆ ಎಂದು ವಸುಂಧರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.