ADVERTISEMENT

ಜಾತಿಯಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 8:31 IST
Last Updated 8 ಏಪ್ರಿಲ್ 2021, 8:31 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌    

ಬೆಳಗಾವಿ: ‘ಕಾಂಗ್ರೆಸ್‌ಗೆ ಎಲ್ಲ ಸಮಾಜದವರೂ ಬೇಕು. ನಾವು ಜಾತಿ ಮೇಲಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ. ಲಿಂಗಾಯತರಿರಲಿ, ಮರಾಠ ಸಮುದಾಯವಿರಲಿ ಎಲ್ಲರೂ ನಮ್ಮ ಸಹೋದರರೆ. ಬಿಜೆಪಿಯವರಂತೆ ನಾವು ಯಾರನ್ನೂ ಬೇರೆಯಾಗಿ ನೋಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಾರಕವಾದ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ದೆಹಲಿಯ ಗಡಿಗಳಲ್ಲಿ ರೈತರು ಚಳವಳಿ ನಡೆಸುತ್ತಿದ್ದರೂ ಸರ್ಕಾರದ ಸ್ಪಂದಿಸದೆ ಇರುವುದಕ್ಕೆ ಎಲ್ಲರಲ್ಲೂ ಆಕ್ರೋಶವಿದೆ. ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದರಿಂದ ರೈತರೆಲ್ಲರೂ ನಮಗೆ ಉಪ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

‘ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು?’ ಎಂಬ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಶೆಟ್ಟರ್‌ಗೆ ಮಾತನಾಡಲು ಶಕ್ತಿ ಕೊಟ್ಟಿದ್ದೇ ನಾವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದೆ ನಾವು. ಬೇಕಾದಷ್ಟು ಸಂಘ–ಸಂಸ್ಥೆ, ಕಾರ್ಖಾನೆ ಮಾಡಿಕೊಳ್ಳಲು ಬಲ ನೀಡಿದವರೆ ನಾವು’ ಎಂದು ಟಾಂಗ್ ನೀಡಿದರು.

ADVERTISEMENT

‘ನನ್ನ ರಾಜೀನಾಮೆ ಕೇಳಿರುವ ಲಖನ್‌ ಜಾರಕಿಹೊಳಿಗೆ ಒಳ್ಳೆಯದಾಗಲಿ, ಯಶಸ್ಸು ಸಿಗಲಿ’ ಎಂದು ಪ್ರತಿಕ್ರಿಯಿಸಿದರು. ‘ಸಾರಿಗೆ ನೌಕರರ ಮುಷ್ಕರಕ್ಕೆ ನಮ್ಮ ಬೆಂಬಲವಿದೆ. ಅವರು ಹೋರಾಟ ಮೊಟಕುಗೊಳಿಸಬಾರದು. ಸರ್ಕಾರ ಅವರ ನೋವನ್ನು ಕೇಳಬೇಕು. ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್ ಬೆಂಬಲಿಸುವಂತೆ ಕಮ್ಯುನಿಸ್ಟ್‌ ಪಕ್ಷದವರು, ರೈತ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸುತ್ತಿದ್ದೇನೆ. ರೈತ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ನಮಗೆ ಬೆಂಬಲ ಕೊಡುವುದಾಗಿ ಅವರು ಹೇಳಿದ್ದಾರೆ’ ಎಂದರು.

ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ‘ಲಿಂಗಾಯತ ಸಮಾಜದ ಮತಗಳನ್ನು ಸೆಳೆಯಲು ತಂತ್ರ ರೂಪಿಸಲಾಗಿದೆ. ಲಕ್ಷ್ಮಿ ಹೆಬ್ಬಾಳಕರ, ನಾನು, ಎ.ಬಿ. ಪಾಟೀಲ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬರಲಿದ್ದಾರೆ. ಆಗ ಮತ್ತಷ್ಟು ಬಲ ಬರುತ್ತದೆ. ಬಿಜೆಪಿ ಸರ್ಕಾರದಿಂದಾಗಿ ಒಳ್ಳೆಯ ದಿನಗಳು ಬಂದಿಲ್ಲ. ಇದನ್ನು ಜನರು ಅರಿತಿದ್ದಾರೆ’ ಎಂದು ಹೇಳಿದರು.

‘ಸಾರಿಗೆ ನೌಕರರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.

ಬಳಿಕ ಶಿವಕುಮಾರ್‌ ಅವರು ಪಕ್ಷದ ಚುನಾವಣಾ ಸಮಿತಿ ಸಭೆ ನಡೆಸಿದರು. ಮುಖಂಡರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ, ಪ್ರಕಾಶ ಹುಕ್ಕೇರಿ, ಎ.ಬಿ. ಪಾಟೀಲ, ಎಚ್‌.ಎಂ. ರೇವಣ್ಣ, ವೀರಣ್ಣ ಮತ್ತಕಟ್ಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.