ADVERTISEMENT

ಕೆಪಿಎಸ್‌ಸಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ; ಅಭ್ಯರ್ಥಿಗಳಿಗೆ ತೊಂದರೆ

ಸಹಾಯಕ ನಿಯಂತ್ರಕರ ಹುದ್ದೆ ಆಕಾಂಕ್ಷಿಗಳಿಗೆ ಗೊಂದಲ

ಎಂ.ಮಹೇಶ
Published 18 ಡಿಸೆಂಬರ್ 2020, 10:02 IST
Last Updated 18 ಡಿಸೆಂಬರ್ 2020, 10:02 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಳಗಾವಿ: ಕೆಪಿಎಸ್‌ಸಿಯು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರ ಹುದ್ದೆಯ ಮುಖ್ಯಪರೀಕ್ಷೆಗೆ ಹೊರಡಿಸಿದ ಆದೇಶವು ಆಕಾಂಕ್ಷಿಗಳ ನೆಮ್ಮದಿ ಕೆಡಿಸಿದೆ. ಗ್ರಾಮೀಣ ವಿದ್ಯಾರ್ಥಿಗಳು, ದೂರದ ನಗರಕ್ಕೆ ಹೋಗಿ ಪರೀಕ್ಷೆಗೆ ಹಾಜರಾಗುವುದೋ ಅಥವಾ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸುವುದೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

‌ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಜ.31ಕ್ಕೆ ಅಧಿಸೂಚನೆ ಹೊರಡಿಸಿತ್ತು. 54 ಹುದ್ದೆಗಳಿಗೆ 9ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆದಿದೆ. ಇದರಲ್ಲಿ 980 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಹಿಂದೆ ಡಿ.21ರಿಂದ ಡಿ.24ರವರೆಗೆ ಮುಖ್ಯ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಬಂದ ಕಾರಣ, ಡಿ.22ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಡಿ.28ಕ್ಕೆ ಮುಂದೂಡಲಾಗಿದೆ. ವೇಳಾಪಟ್ಟಿಯಲ್ಲಿ ಇತರ ಬದಲಾವಣೆ ಇಲ್ಲ.

ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳೂ ಇದ್ದಾರೆ. ಆದರೆ, ಬೆಂಗಳೂರು ಹಾಗೂ ಧಾರವಾಡದಲ್ಲಿ ಮಾತ್ರವೇ ಪರೀಕ್ಷಾ ಕೇಂದ್ರಗಳಿವೆ. ಅಭ್ಯರ್ಥಿಗಳು ನಾಲ್ಕು ದಿನಗಳು ವಾಸ್ತವ್ಯವಿದ್ದು ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದರು. ಆದರೆ, ಈಗ ಪರಿಷ್ಕರಿಸಿರುವುದರಿಂದ ಪರೀಕ್ಷೆ ಮುಗಿಸಿ ಊರಿಗೆ ಮರಳಿ ಮತ್ತೆ ಮುಂದಿನ ಪರೀಕ್ಷೆಗೆ ಹೋಗಬೇಕಾದ ಸ್ಥಿತಿ ಇದೆ. ಇಲ್ಲವಾದರೆ ಪರೀಕ್ಷಾ ಕೇಂದ್ರವಿರುವ ನಗರದಲ್ಲೇ ಡಿ. 28ರವರೆಗೂ ವಾಸ್ತವ್ಯ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ADVERTISEMENT

ಡಿ. 21, ಡಿ.23 ಹಾಗೂ ‌ಡಿ.24ರ ಪರೀಕ್ಷೆ ಮುಗಿಸಿ, ಮತ್ತೆ ಡಿ.28ಕ್ಕೆ ಕೊನೆ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಮೈಸೂರು ಭಾಗದವರು ಬೆಂಗಳೂರಿಗೆ ಹಾಗೂ ಮುಂಬೈ ಮತ್ತು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಧಾರವಾಡಕ್ಕೆ ಮತ್ತೆ ಬರಬೇಕಾಗುತ್ತದೆ. ಎಲ್ಲ ಪರೀಕ್ಷೆಯನ್ನು ಚುನಾವಣೆ ನಂತರವೇ ಒಮ್ಮೆಲೇ ಮುಗಿಸಿದರೆ ಅನುಕೂಲವಾಗುತ್ತದೆ. ಈಗ, ಎಲ್ಲ ಪರೀಕ್ಷೆ ಮುಗಿಸಿಕೊಂಡು ಒಮ್ಮೆಲೆ ಮರಳೋಣವೆಂದರೆ ಮತದಾನದ ಹಕ್ಕಿನಿಂದ ವಂಚಿತವಾಗಬೇಕಾಗುತ್ತದೆ. ಹೀಗಾಗಿ, ಕೆಪಿಎಸ್‌ಸಿಯು ತನ್ನ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೆಲವು ಪರೀಕ್ಷಾರ್ಥಿಗಳು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ದೊಡ್ಡ ನಗರಗಳಲ್ಲಿ ವಾರದವರೆಗೆ ಕೊಠಡಿ ಮಾಡಿಕೊಂಡು ಉಳಿದುಕೊಳ್ಳುವಷ್ಟು ಆರ್ಥಿಕ ಚೈತನ್ಯ ನಮಗಿಲ್ಲ. ಕೋವಿಡ್ ಕಾರಣದಿಂದ ಸಣ್ಣಪುಟ್ಟ ಹೋಟೆಲ್‌ಗಳು ಮುಚ್ಚಿವೆ. ದೊಡ್ಡ ಹೋಟೆಲ್‌ಗಳಲ್ಲಿ ಉಳಿಯುವಷ್ಟು ಹಣವಿಲ್ಲ. ಹೀಗಾಗಿ, ತೊಂದರೆ ಎದುರಾಗಿದೆ. ಆದ್ದರಿಂದ, ಕೆಪಿಎಸ್‌ಸಿಯು ಎಲ್ಲರಿಗೂ ಅನುಕೂಲವಾಗುವಂತಹ ನಿರ್ಧಾರ ಕೈಗೊಳ್ಳಬೇಕು’ ಎಂಬ ಕೋರಿಕೆ ಅವರದು.

ಮೂಲಗಳ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಶೇ.50ಕ್ಕೂ ಹೆಚ್ಚಿನ ಅಭ್ಯರ್ಥಿಗಳು ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಯನ್ನು ಗ್ರಾಮ ಪಂಚಾಯಿತಿ ಚುನಾವಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ಹೀಗಾಗಿ, ಅವರು ಕೆಲಸ ನಿರ್ವಹಿಸುವುದೋ ಅಥವಾ ಪರೀಕ್ಷೆಗೆ ಹೋಗುವುದೋ ಎಂಬ ಚಿಂತೆಗೆ ಒಳಗಾಗಿದ್ದಾರೆ. ಅವಕಾಶವೊಂದನ್ನು ಕಳೆದುಕೊಳ್ಳುವ ಭೀತಿ ಅವರದಾಗಿದೆ.

‘ಚುನಾವಣಾ ಕೆಲಸದಿಂದ ವಿನಾಯಿತಿ ಕೊಡಬೇಕು. ಇಲ್ಲವೇ ಪರೀಕ್ಷೆ ಮುಂದೂಡಬೇಕು’ ಎನ್ನುವುದು ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.