ADVERTISEMENT

ಮಳೆ ತಗ್ಗಿದರೂ ತಗ್ಗದ ಕೃಷ್ಣೆಯ ಪ್ರವಾಹ, 4,485 ಮಂದಿಗೆ ಆಶ್ರಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 13:32 IST
Last Updated 1 ಆಗಸ್ಟ್ 2024, 13:32 IST
<div class="paragraphs"><p>ಗೋಕಾಕ ಹೊರವಲಯದ ಜತ್ತ– ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಮೇಲೆ ಘಟಪ್ರಭೆ ನೀರು ಹರಿದಿದ್ದು, ಗುರುವಾರ ಸಂಚಾರ ಬಂದ್ ಮಾಡಲಾಗಿದೆ – ಪ್ರಜಾವಾಣಿ ಚಿತ್ರ: ರಾಮೇಶ್ವರ&nbsp;ಕಲ್ಯಾಣಶೆಟ್ಟಿ</p><p></p></div>

ಗೋಕಾಕ ಹೊರವಲಯದ ಜತ್ತ– ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಮೇಲೆ ಘಟಪ್ರಭೆ ನೀರು ಹರಿದಿದ್ದು, ಗುರುವಾರ ಸಂಚಾರ ಬಂದ್ ಮಾಡಲಾಗಿದೆ – ಪ್ರಜಾವಾಣಿ ಚಿತ್ರ: ರಾಮೇಶ್ವರ ಕಲ್ಯಾಣಶೆಟ್ಟಿ

   

ಬೆಳಗಾವಿ: ಜುಲೈ 1ರಿಂದ ಆಗಸ್ಟ್‌ 1ರವರೆಗೆ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 803 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 99 ಮನೆಗಳು ಪೂರ್ಣ ಪ್ರಮಾಣದಲ್ಲಿ ಬಿದ್ದಿವೆ. 6 ಜನ ಸಾವನ್ನಪ್ಪಿದ್ದು, 12 ಜಾನುವಾರುಗಳ ಪ್ರಾಣ ಹಾನಿಯಾಗಿದೆ.

ADVERTISEMENT

ಮಳೆ ತಗ್ಗಿದ್ದರೂ ಕೃಷ್ಣಾ ಹಾಗೂ ಘಟ‍ಪ್ರಭಾ ನದಿಗಳ ಪ್ರವಾಹ ಯಥಾಸ್ಥಿತಿಯಲ್ಲಿದೆ. ಕಾರಣ, ಎಲ್ಲ 53 ಕಾಳಜಿ ಕೇಂದ್ರಗಳನ್ನೂ ಮುಂದುವರಿಸಲಾಗಿದ್ದು, 4,485 ಮಂದಿ ಆಶ್ರಯ ಪಡೆದಿದ್ದಾರೆ.

ಗೋಕಾಕ ನಗರಕ್ಕೆ ಹೊಂದಿಕೊಂಡ ಜತ್ತ– ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಬುಧವಾರ ತೆರವುಗೊಂಡಿತ್ತು. ಹಿಡಕಲ್ ಜಲಾಶಯದಿಂದ ಮತ್ತಷ್ಟು ನೀರು ಬಿಟ್ಟಿದ್ದರಿಂದ ಘಟಪ್ರಭೆ ಮತ್ತೆ ಉಕ್ಕಿ ಹರಿಯುತ್ತಿದೆ. ಇಲ್ಲಿ 53 ಸಾವಿರ ಕ್ಯುಸೆಕ್‌ ನೀರು ಹರಿಯುತ್ತಿದೆ. ಗುರುವಾರ ಬೆಳಿಗ್ಗೆಯಿಂದ ಸೇತುವೆ ಸಂಚಾರ ಮತ್ತೆ ಬಂದ್ ಆಗಿದೆ. ಪ್ರವಾಹ ಇಳಿದಿದೆ ಎಂದು ಮನೆಗಳಿಗೆ ತೆರಳಿದ್ದ 300ಕ್ಕೂ ಹೆಚ್ಚು ಜನ ಮತ್ತೆ ಕಾಳಜಿ ಕೇಂದ್ರಗಳಿಗೆ ಮರಳಿದರು.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮತ್ತೆ ಮಳೆ ರೌದ್ರಾವತಾರ ತಾಳಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ ಬ್ಯಾರೇಜ್ ಬಳಿ 2.88 ಲಕ್ಷ ಕ್ಯುಸಕ್ ನೀರು ಹರಿಯುತ್ತಿದೆ. ಕಳೆದ 10 ದಿನಗಳಿಂದ ಮುಳುಗಡೆಯಾಗುರುವ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 10 ಪ್ರಮುಖ ಸೇತುವೆಗಳು ಇನ್ನೂ ಬಂದಾಗಿವೆ.

*

ಬೋಟ್‌ ಪಲ್ಟಿ: ತಪ್ಪಿದ ಅನಾಹುತ:

ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದ ಬಳಿ ಗುರುವಾರ, ಎನ್‌ಡಿಆರ್‌ಎಫ್‌ ತಂಡ ಬೋಟ್‌ ಕೃಷ್ಣಾ ನದಿ ಸೆಳವಿಗೆ ಸಿಕ್ಕು ಪಲ್ಟಿಯಾಯಿತು. ಎಲ್ಲ ಸಿಬ್ಬಂದಿ ಲೈಫ್‌ ಜಾಕೆಟ್‌ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದರು.

ಇಲ್ಲಿರುವ ಜಾಕ್ವೆಲ್‌ ಕೃಷ್ಣಾ ನದಿ ನೀರಿನಲ್ಲಿ ಮುಳುಗಿದೆ. ಇದರಿಂದ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಈ ಜ್ವಾಕ್ವೆಲ್‌ ದುರಸ್ತಿಗೆ ವಾಟರ್ ಮ್ಯಾನ್, ಲೈನ್ ಮ್ಯಾನ್ ಹಾಗೂ ಎನ್‌ಡಿಆರ್‌ಎಫ್‌ ತಂಡದವರು ಬೋಟ್‌ ಮೂಲಕ ತೆರಳಿದ್ದರು. ನೀರಿನ ರಭಸಕ್ಕೆ ಬೋಟ್‌ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಮನೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.