ಕಾಗವಾಡ: ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಗುರುವಾರ ಕುಸುನಾಳ- ಉಗಾರ ಬುದ್ರಕ್ ಹಾಗೂ ಮೊಳವಾಡ- ಇಂಗಳಿ ರಸ್ತೆ ಜಲಾವೃತವಾಗಿದೆ. ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ತಹಶೀಲ್ದಾರ್ ರವೀಂದ್ರ ಹಾದಿಮನಿ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಹರಿವು ನಾಳೆ ನಾಡಿದ್ದು ಕಡಿಮೆ ಆಗುವ ಸಾಧ್ಯತೆ ಇದೆ. ಜನರು ಎಚ್ಚರಿಕೆಯಿಂದ ಇರಬೇಕು. ತಾಲ್ಲೂಕು ಆಡಳಿತ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.
ಉಪತಹಶೀಲ್ದಾರ್ ರಶ್ಮಿ ಜಕಾತಿ, ತಾಲ್ಲೂಕು ಪಂಚಾಯಿತಿ ಇಒ ವೀರಣ್ಣ ವಾಲಿ, ಪಿಎಸ್ಐ ರಾಘವೇಂದ್ರ ಖೋತ, ಕಂದಾಯ ನಿರೀಕ್ಷಕ ಎಸ್.ಬಿ. ಮುಲ್ಲಾ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.
ಜಮೀನುಗಳಿಗೆ ನುಗ್ಗಿದ ನೀರು: ಕಳೆದ ಒಂದು ವಾರದಿಂದ ಸುರಿದ ಮಳೆ ಕೊಂಚ ಬಿಡುವು ನೀಡಿದೆ. ಆದರೂ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿ ನದಿ ತೀರದ ಕಾತ್ರಾಳ, ಬಣಜವಾಡ, ಮೊಳವಾಡ, ಕುಸುನಾಳ, ಐನಾಪೂರ, ಕೃಷ್ಣ ಕಿತ್ತೂರು ಗ್ರಾಮದ ತಗ್ಗು ಪ್ರದೇಶದ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ರೈತರು ಆತಂಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.