ADVERTISEMENT

ಎಲ್ಲ ರಾಜಕಾರಣಿಗಳೂ ದಡ್ಡರಲ್ಲ: ಕೆ.ಎಸ್. ಈಶ್ವರಪ್ಪ  

ಜಿಲ್ಲಾ ಪಂಚಾಯ್ತಿಗಳ ಸಿಇಒಗಳ ಸಭೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 8:43 IST
Last Updated 8 ಸೆಪ್ಟೆಂಬರ್ 2019, 8:43 IST
   

ಬೆಳಗಾವಿ: ‘‌ಜಿಲ್ಲಾ ಪಂಚಾಯ್ತಿಗಳ ಸಿಇಒಗಳು ಗ್ರಾಮೀಣಾಭಿವೃದ್ಧಿಗೆ ವಿನೂತನ ಯೋಜನೆಗಳನ್ನು ರೂಪಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಭಾನುವಾರ ನಡೆದ ಜಿಲ್ಲಾ ಪಂಚಾಯ್ತಿ ಸಿಇಒಗಳ ರಾಜ್ಯಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಯೋಜನೆಗಳ ಕುರಿತು ಜನಪ್ರತಿನಿಧಿಗಳಿಗೆ ಸಲಹೆ ನೀಡುವವರು ಅಧಿಕಾರಿಗಳೇ. ಅವರು ಪ್ರತಿಭೆ, ಬುದ್ಧಿವಂತಿಕೆಯನ್ನು ರಾಜ್ಯದ ಅಭಿವೃದ್ಧಿಗೆ ಧಾರೆ ಎರೆಯಬೇಕು. ಇಲ್ಲವಾದಲ್ಲಿ ಬುದ್ಧಿವಂತಿಕೆ ವ್ಯರ್ಥವಾಗುತ್ತದೆ; ಜನರಿಗೆ ಅನ್ಯಾಯವಾಗುತ್ತದೆ’ ಎಂದು ಹೇಳಿದರು.

ADVERTISEMENT

3 ತಿಂಗಳಿಗೊಮ್ಮೆ ಸಭೆ:

‘ರಾಜ್ಯದಲ್ಲಿ ಜಾರಿಗೊಳಿಸಿದ ರೈತ ಬಜೆಟ್, ಭಾಗ್ಯಲಕ್ಷ್ಮಿ ಮೊದಲಾದ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಅಂತಹ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ 3 ತಿಂಗಳಿಗೊಮ್ಮೆ ಸಿಇಒಗಳ ಸಮಾಲೋಚನಾ ಸಭೆ ನಡೆಸಿ, ಸಲಹೆಗಳನ್ನು ಕೇಳಲಾಗುವುದು’ ಎಂದು ತಿಳಿಸಿದರು.

‘ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದರೂ ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರು ಕಲ್ಪಿಸುವುದು ಇಂದಿಗೂ ಸಾಧ್ಯವಾಗಿಲ್ಲ. ಹೀಗಾದರೆ ಹೇಗೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಬಯಲು ಬಹಿರ್ದೆಸೆ ತಪ್ಪಿಲ್ಲ:

‘ಹಳ್ಳಿಗಳಲ್ಲಿ ಇಂದಿಗೂ ಬಯಲು ಬಹಿರ್ದೆಸೆ ತಪ್ಪಿಲ್ಲ. ಶಾಸಕರು, ಸಚಿವರು, ಅಧಿಕಾರಿಗಳಾದ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಪರಿಸ್ಥಿತಿ ಬಂದರೆ ಏನೆನಿಸುತ್ತದೆ ಎಂದು ಪ್ರಶ್ನಿಸಿಕೊಳ್ಳಬೇಕು. ಸಾಕಷ್ಟು ಅಭಿವೃದ್ಧಿ ಆಗಿದೆ ನಿಜ. ಆದರೆ, ನೂರಕ್ಕೆ ನೂರರಷ್ಟು ವೈಯಕ್ತಿಕ ಶೌಚಾಲಯಗಳನ್ನು ಒದಗಿಸುವುದು ಸಾಧ್ಯವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನಾನು ಪುಣ್ಯ ಮಾಡಿದ್ದರಿಂದ, ಆರ್‌ಡಿಪಿಆರ್ ಖಾತೆ ಸಿಕ್ಕಿದೆ. ನಾವೆಲ್ಲರೂ ಗ್ರಾಮೀಣ ಜನರ ಅಭಿವೃದ್ಧಿಗೆ ಒತ್ತು ಕೊಡಬೇಕು; ಮುಕ್ತವಾಗಿ ಚರ್ಚಿಸಬೇಕು. ಗ್ರಾಮಾಂತರ ಪ್ರದೇಶದ ಬಡವರು, ರೈತರಿಗೆ ಅನುಕೂಲ ಮಾಡಿಕೊಡಬೇಕು. ರಾಜ್ಯದಲ್ಲಿ ಸಾಕಷ್ಟು ಉತ್ತಮ ಕೆಲಸವಾಗಿದೆ. ಕೇಂದ್ರ ಸರ್ಕಾರದ ಮೆಚ್ಚುಗೆಯೂ ಸಿಕ್ಕಿದೆ. ಅಧಿಕಾರಿಗಳಲ್ಲಿ ಎಲ್ಲರೂ ಭ್ರಷ್ಟರು ಅಥವಾ ಸೋಮಾರಿಗಳಲ್ಲ; ಆದರೆ ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಸರ್ಕಾರ ಅಥವಾ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಇದು ತಪ್ಪಬೇಕು. ಈಗಾಗಲೇ ಬಹಳಷ್ಟು ಯೋಜನೆಗಳು ಜಾರಿಯಲ್ಲಿವೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಇನ್ನೂ ಏನಾದರೂ ಹೊಸ ಯೋಜನೆಗಳ ಕಲ್ಪನೆಗಳಿದ್ದರೆ ಸಂಕೋಚವಿಲ್ಲದೇ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಇದ್ದರು.

ಸೆ. 9ರಂದು ಎಲ್ಲ ಜಿಲ್ಲಾ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.