ಬೆಳಗಾವಿ: ವೇತನ ಪರಿಷ್ಕರಣೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ಮಂಗಳವಾರ ಬಸ್ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಬಹುಪಾಲು ಬಸ್ಸುಗಳೂ ಘಟಕದಿಂದ ಹೊರಬರಲಿಲ್ಲ. ಬೆಳಿಗ್ಗೆಯೇ ಶಾಲೆ, ಕಾಲೇಜು, ನೌಕರಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಗಿದೆ.
ನಗರ ಹಾಗೂ ಗ್ರಾಮೀಣ ಸಾರಿಗೆಯಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರು ಬಸ್ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ.
ತುರ್ತು ಸಂದರ್ಭ ಅನುಸರಿಸಿ ಶೇ 30ರಷ್ಟು ಬಸ್ಸುಗಳನ್ನು ಮಾತ್ರ ಕಾರ್ಯಾಚರಣೆ ನಡೆಸಲಾಗುತ್ತದೆ.
ಮಹಾರಾಷ್ಟ್ರದಿಂದ ನಗರಕ್ಕೆ ಬರುವ ಬಸ್ಸುಗಳು ಸಂಚರಿಸುತ್ತವೆ. ಅವುಗಳೂ ಪ್ರಯಾಣಿಕರನ್ನು ದೂರದಲ್ಲಿ ಇಳಿಸಿ ವಾಪಸ್ ಹೋಗಿವೆ. ಇಲ್ಲಿಂದ ಯಾವುದೇ ಬಸ್ ಹೊರಬಿದ್ದಿಲ್ಲ.
ಮುಷ್ಕರಕ್ಕೆ ಕರೆ ಕೊಟ್ಟವರೊಂದಿಗೆ ಸೋಮವಾರ ನಡೆದ ಸಂಧಾನ ವಿಫಲವಾಗಿದೆ. ಅಲ್ಲದೇ, ಮುಷ್ಕರ ನಡೆಸದಂತೆ ಹೈಕೋರ್ಟಿನಿಂದ ಆದೇಶ ನೀಡಿದ್ದರೂ ಸರ್ಕಾರ ಅದರಲ್ಲಿ ನಮ್ಮನ್ನು ಪಾರ್ಟಿಯಾಗಿ ಪರಿಗಣಿಸಿಲ್ಲ. ಹೀಗಾಗಿ, ಆದೇಶ ನಮಗೆ ಸಂಬಂಧಪಡುವುದಿಲ್ಲ. ಮುಷ್ಕರ ಮಾಡುತ್ತೇವೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳು, 'ಮುಷ್ಕರ ಕೈ ಬಿಡುವಂತೆ ಮನವರಿಕೆ ಮಾಡಲಾಗುತ್ತಿದೆ. ಈವರೆಗೆ ಯಾವುದೂ ಅಂತಿಮವಾಗಿಲ್ಲ. ಮುಂಜಾಗೃತಾ ಕ್ರಮವಾಗಿ ಟೆಂಪೊ, ಆಟೊ, ಖಾಸಗಿ ವಾಹನ ಸವಾರರಿಗೆ ಮನವರಿಕೆ ಮಾಡಲಾಗಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.