ADVERTISEMENT

ಚಿಕ್ಕೋಡಿ: ಕುಂಬಾರರಿಗೆ ಸಂಕಷ್ಟ ತಂದೊಡ್ಡಿದ ಕೋವಿಡ್

ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆ ಕುಸಿತ

ಸುಧಾಕರ ಎಸ್.ತಳವಾರ, ಬೆಂಗಳೂರು
Published 9 ನವೆಂಬರ್ 2020, 20:16 IST
Last Updated 9 ನವೆಂಬರ್ 2020, 20:16 IST
ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಮಣ್ಣಿನ ಹಣತೆಗಳ ತಯಾರಿಕೆಯಲ್ಲಿ ಕುಂಬಾರರು ತೊಡಗಿರುವುದು (ಸಂಗ್ರಹ ಚಿತ್ರ)
ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಮಣ್ಣಿನ ಹಣತೆಗಳ ತಯಾರಿಕೆಯಲ್ಲಿ ಕುಂಬಾರರು ತೊಡಗಿರುವುದು (ಸಂಗ್ರಹ ಚಿತ್ರ)   

ಚಿಕ್ಕೋಡಿ: ಆಧುನಿಕತೆಯೊಂದಿಗೆ ಪೈಪೋಟಿ ನಡೆಸುತ್ತಾ ಕುಲಕಸಬು ಕುಂಬಾರಿಕೆ ನೆಚ್ಚಿಕೊಂಡು ಬದುಕು ನಡೆಸುತ್ತಿರುವ ಕುಟುಂಬಗಳ ಬದುಕಿಗೂ ಕೋವಿಡ್-19 ಸಂಕಷ್ಟ ತಂದೊಡ್ಡಿದೆ.

ತಾಲ್ಲೂಕಿನ ಕೋಥಳಿ ಗ್ರಾಮದ 25 ಕುಟುಂಬಗಳು ಕುಂಬಾರಿಕೆ ನೆಚ್ಚಿಕೊಂಡು ಬದುಕು ಸಾಗಿಸುತ್ತಿವೆ. ಅದರಲ್ಲೂ ದೀಪಾವಳಿ ಇವರಿಗೆ ಹೆಚ್ಚಿನ ಆದಾಯ ತಂದುಕೊಡುವ ಹಬ್ಬ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಣ್ಣಿನ ಹಣತೆಗಳಿಗೆ ಬೇಡಿಕೆ ಕುಸಿದಿದೆ. ಈ ನಡುವೆ, ಪ್ರಸಕ್ತ ವರ್ಷ ಕೊರೊನಾದಿಂದಾಗಿ ಹಣತೆಗಳ ಬೇಡಿಕೆ ತೀರಾ ಕುಸಿದಿದ್ದು, ಮಣ್ಣಿನ ಉತ್ಪನ್ನಗಳು ಮಾರಾಟವಾಗದೆ ಕುಂಬಾರ ಕುಟುಂಬದವರು ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ. ಕೆಲವರು ಪರ್ಯಾಯ ಉದ್ಯೋಗದತ್ತ ವಾಲುತ್ತಿದ್ದಾರೆ.

ಲಕ್ಷಾಂತರ ಹಣತೆಗಳನ್ನು ತಯಾರಿಸುತ್ತಿದ್ದ ಈ ಕುಟುಂಬಗಳು ಪ್ರಸಕ್ತ ವರ್ಷ 25ಸಾವಿರದಷ್ಟು ಮಾತ್ರ ತಯಾರಿಸಿವೆ. ಹಿಂದಿನಂತೆ ಈ ಬಾರಿ ಬೇಡಿಕೆ ಬಂದಿಲ್ಲ ಎನ್ನುತ್ತವೆ ಈ ಕುಟುಂಬಗಳು.

ADVERTISEMENT

‘ಪ್ರತಿ ವರ್ಷ ಕೋಥಳಿಯ ಕುಂಬಾರ ಕುಟುಂಬಗಳು 2ರಿಂದ 3 ಲಕ್ಷದಷ್ಟು ಹಣತೆಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೇ, ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ತಾಸಗಾಂವ, ಜಯಸಿಂಗಪುರ ಮೊದಲಾದೆಡೆ ಪೂರೈಸುತ್ತಿದ್ದವು. ಆದರೆ, ಮೂರ್ನಾಲ್ಕು ವರ್ಷಗಳಿಂದ ಬೇಡಿಕೆ ಕಡಿಮೆಯಾಗಿದೆ. ಪ್ರಸಕ್ತ ವರ್ಷ ಕೋವಿಡ್ ಕೂಡ ತೊಂದರೆ ನೀಡಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಸರಳವಾಗಿ ಆಚರಣೆಗೆ ಜನರು ಮುಂದಾಗಿರುವುದರಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಇಲ್ಲ’ ಎಂದು ವಿಠ್ಠಲ ಕುಂಬಾರ ತಿಳಿಸಿದರು.

‘100 ಹಣತೆಗಳನ್ನು ತಯಾರಿಸಲು ₹ 110 ವೆಚ್ಚ ತಗಲುತ್ತದೆ. ಮಾರುಕಟ್ಟೆಯಲ್ಲಿ 100 ಹಣತೆಗಳಿಗೆ ₹ 130ರಿಂದ ₹ 140 ಬೆಲೆ ದೊರೆಯುತ್ತಿದೆ. ಸಂಕ್ರಾಂತಿಗೆ ಕುಡಿಕೆ, ದಸರೆ ಮತ್ತು ದೀಪಾವಳಿಗೆ ಹಣತೆ ತಯಾರಿಸಿ ಮಾರುತ್ತೇವೆ. ಮುಂಬರುವ ಸಂಕ್ರಾಂತಿಗೂ ಕುಡಿಕೆಗಳ ಬೇಡಿಕೆ ಕುಸಿಯುವ ಆತಂಕ ಎದುರಾಗಿದೆ. ಮಣ್ಣಿನ ಹಣತೆಗಳನ್ನು ಬಳಸುವುದನ್ನು ಜನರು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಈ ಕಸುಬು ನಂಬಿ ಬದುಕು ನಡೆಸುವುದು ಕಷ್ಟಕರವಾಗುತ್ತಿದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ’ ಎಂದು ರಾಜು ಕುಂಬಾರ ಹೇಳಿದರು.

‘ಕುಂಬಾರಿಕೆ ಕಸುಬು ಅವನತಿಯತ್ತ ಸಾಗುತ್ತಿದೆ. ಈ ವೃತ್ತಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಖಾನಾಪುರದಲ್ಲಿ ಕುಂಬಾರಿಕೆ ತರಬೇತಿ ಕೇಂದ್ರವಿದೆ. ಆದರೆ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಕುಂಬಾರ ಕುಟುಂಬಗಳಿಗೆ ಈ ಕೇಂದ್ರದಿಂದ ಯಾವುದೇ ರೀತಿಯ ಸೌಕರ್ಯಗಳು ದೊರಕಿಲ್ಲ. ಸರ್ಕಾರದ ಸವಲತ್ತುಗಳು ಗ್ರಾಮೀಣ ಪ್ರದೇಶದ ಕುಂಬಾರರಿಗೆ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರ ಇತ್ತ ಗಮನಹರಿಸಬೇಕು’ ಎಂದು ಕರ್ನಾಟಕ ಪ್ರದೇಶ ಕುಂಬಾರರ ಸಂಘದ ಕಾರ್ಯಾಧ್ಯಕ್ಷ ಬಾಳಾಸಾಹೇಬ್ ಕುಂಬಾರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.