ADVERTISEMENT

ಗೋಕಾಕ | 'ಯುವಕರು ಜಡತೆ ತೊಡೆದು ವ್ಯಕ್ತಿತ್ವ ರೂಪಿಸಿಕೊಳ್ಳಿ'

ಕುವೆಂಪು ದಿನಾಚರಣೆ ಕಾರ್ಯಕ್ರಮ: ಯುವಕವಿ ಪ್ರೊ. ಮೆಹಬೂಬಸಾಹೇಬ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 3:09 IST
Last Updated 31 ಡಿಸೆಂಬರ್ 2025, 3:09 IST
ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪು ದಿನಾಚರಣೆ ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕವಿ-ಶಿಕ್ಷಕ ಈಶ್ವರ ಮಮದಾಪೂರ ಉದ್ಘಾಟಿಸಿದರು
ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪು ದಿನಾಚರಣೆ ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕವಿ-ಶಿಕ್ಷಕ ಈಶ್ವರ ಮಮದಾಪೂರ ಉದ್ಘಾಟಿಸಿದರು   

ಗೋಕಾಕ: ಯುವಕರು ಜಡತೆಯನ್ನು ತೊಡೆದು ಅನಿಕೇತನವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಜಾತಿ, ಮತ ಪಂಥವನ್ನು ಮೀರಿ ಭಾವೈಕ್ಯತೆಯೊಂದಿಗೆ ದೇಶವನ್ನು ಕಟ್ಟಬೇಕು ಎಂಬ ಕವಿ ಕುವೆಂಪು ಅವರ ಮಾತುಗಳನ್ನು ಯುವಕವಿ ಪ್ರೊ. ಮೆಹಬೂಬಸಾಹೇಬ ಜ್ಞಾಪಿಸಿಕೊಂಡರು.

ಇಲ್ಲಿನ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕುವೆಂಪು ದಿನಾಚರಣೆ ಹಾಗೂ ಪ್ರಶಿಕ್ಷಣಾರ್ತಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಮತ್ತು ಗಾಯನ ಸ್ಪರ್ಧಾ ವಿಜೇತ ವಿರ್ಧಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆದ್ಯಾತ್ಮ ಮತ್ತು ವೈಚಾರಿಕತೆ ಎರಡನ್ನೂ ಕೂಡಿಸಿಕೊಂಡು ಭಾವೈಕ್ಯತೆಯ ಮಹತ್ವವನ್ನೂ ತಿಳಿಸಿದ ಶ್ರೇಷ್ಠ ಕವಿ ಕುವೆಂಪು ಎಂದು ಬಣ್ಣಿಸಿದರು.

ADVERTISEMENT

ಶಾಲಾ ಕಾಲೇಜುಗಳಲ್ಲಿ ನಾಡು ನುಡಿಯ ಚಿಂತನೆ ಹಾಗೂ ಶ್ರೇಷ್ಠ ಕವಿಗಳ ಕುರಿತಾದ ಕಾರ್ಯಕ್ರಮಗಳನ್ನು ಕಾವ್ಯಕೂಟ ಬಳಗದ ಈಶ್ವರ ಮಮದಾಪೂರ ಅವರು ಕೈಗೊಳ್ಳುತ್ತಿರುವುದು ಅಭಿನಂದನಾರ್ಹ. ವಿರ್ಧಾರ್ಥಿಗಳಲ್ಲಿ ಸಾಹಿತ್ಯ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಲು ಅನುಕೂಲವಾಗುತ್ತದೆ ಎಂದರು.

ಕಾವ್ಯಕೂಟ ಕನ್ನಡ ಬಳಗದ ಸಂಸ್ಥಾಪಕ ಕವಿ, ಶಿಕ್ಷಕ ಈಶ್ವರ ಮಮದಾಪೂರ ಮಾತನಾಡಿ, ಕುವೆಂಪು ಅವರು ನಾಡು ನುಡಿಯ ಕುರಿತು ಜಾಗೃತಿ ಮೂಡಿಸಿದ ನಾಡಿನ ಶ್ರೇಷ್ಠ ಕವಿ ಚಿಂತಕರು ಎಂದು ಗುಣಗಾನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ವಿ.ಮೋದಿ ಮಾತನಾಡಿದರು. ಕನ್ನಡ ಸಂಘದ ಮುಖ್ಯಸ್ಥ ಪ್ರೊ. ವೈ.ಬಿ.ಕೊಪ್ಪದ ಅವರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತ ಲಕ್ಷ್ಮಿ ತಳವಾರ, ಶೃತಿ ಶಿಂಧಮರದ, ದೇವಕಿ ಜಾಲ್ಯಾಗೋಳ, ಶ್ವೇತಾ ಹುಲ್ಲೋಳಿಕರ ಇವರಿಗೆ ಅಭಿನಂದನಾ ಪತ್ರ ಹಾಗೂ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿ, ಗೌರವಿಸಲಾಯಿತು. ಕನ್ನಡ ಸಂಘದ ಕಾರ್ಯದರ್ಶಿ ತ್ರಿವೇಣಿ ಗುರವ, ರೇಣುಕಾ ವ್ಯಾಪಾರಿ, ಸಾಹಿತಿ ಉಪನ್ಯಾಸಕ ಸುರೇಶ ಮುದ್ದಾರ, ಪ್ರೊ. ಡಿ.ಎಸ್.ಪತ್ತಾರ ಮತ್ತು ಎಸ್.ಎಸ್.ಗಾಣಿಗೇರ ಉಪಸ್ಥಿತರಿದ್ದರು.

ಶ್ವೇತಾ ಹುಲ್ಲೋಳಿಕರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.