ಬೆಳಗಾವಿ: ‘ತೆಲಂಗಾಣ ಸೋನಾ’ ಎಂದು ಕರೆಯಲಾಗುವ ‘ಆರ್.ಎನ್.ಆರ್–15048’ ಭತ್ತದ ತಳಿಯು ಅತ್ಯಂತ ಉಪಯುಕ್ತವಾಗಿದೆ. ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತಿದೆ. ಕಡಿಮೆ ವೆಚ್ಚ ಮಾಡಿ ಹೆಚ್ಚು ಇಳುವರಿ ಹಾಗೂ ಗುಣಮಟ್ಟದ ಫಲಸಲು ನೀಡುತ್ತದೆ. ರೈತರು ಈ ಭತ್ತದ ತಳಿ ಬಿತ್ತನೆಗೆ ಮುಂದಾಗಬೇಕು’ ಎಂದು ಮತ್ತಿಕೊಪ್ಪದ ಐಸಿಎಆರ್– ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಮಂಜುನಾಥ ಚೌರಡ್ಡಿ ಸಲಹೆ ನೀಡಿದರು.
ತಾಲ್ಲೂಕಿನ ಬೆನಕನಹಳ್ಳಿ, ಸಾವಗಾಂವ, ಮಾಂಡೊಳ್ಳಿ ಮತ್ತು ಕಾಕತಿ ಗ್ರಾಮಗಳ ರೈತರೊಂದಿಗೆ ಶನಿವಾರ ಆಯೋಜಿಸಿದ್ದ ಚರ್ಚಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
‘ತೆಲಂಗಾಣ ಸೋನಾ’ ಹೊಸ ಭತ್ತದ ತಳಿಯಾಗಿದೆ. ಅಲ್ಪಾವಧಿಯ, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಇದು ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಸೂಕ್ತವಾಗಿದೆ. ಸಣ್ಣ, ತೆಳ್ಳಗಿನ, ಅತಿ ಸೂಕ್ಷ್ಮ ಧಾನ್ಯದ ವಿಧವಾಗಿದೆ. ಇದು ಹೆಚ್ಚಿನ ಇಳುವರಿ ನೀಡುವ ತಳಿಯಾಗಿದ್ದು, ಬ್ಲಾಸ್ಟ್ ರೋಗಕ್ಕೆ ಪ್ರತಿರೋಧ ಗುಣವನ್ನೂ ಹೊಂದಿದೆ. ತಡವಾಗಿ ಬಿತ್ತನೆ ಮಾಡುವ ಪರಿಸ್ಥಿತಿಗಳಿಗೆ ಸೂಕ್ತ ತಳಿಯಾಗಿದೆ’ ಎಂದು ವಿವರಿಸಿದರು.
ಕೇಂದ್ರದ ವಿಜ್ಞಾನಿ ಎಸ್.ಎಂ. ವಾರದ ಮಾತನಾಡಿ, ‘ರೈತರು ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಕೆ ಮಾಡಬೇಕು’ ಎಂದರು.
ಸಸ್ಯ ಸಂರಕ್ಷಣೆ ವಿಭಾಗದ ವಿಜ್ಞಾನಿ ಎಸ್.ಎಸ್. ಹಿರೇಮಠ ಅವರು, ಮುಂಗಾರು ಬೆಳೆಗಳಲ್ಲಿ ಬರುವ ಪ್ರಮುಖ ರೋಗ ಹಾಗೂ ಕೀಟಗಳನ್ನು ಗುರುತಿಸುವಿಕೆ ಹಾಗೂ ಅವುಗಳ ಹತೋಟಿ ಕ್ರಮಗಳನ್ನು ವಿವರಿಸಿದರು.
ಬೇಸಾಯ ಶಾಸ್ತ್ರ ವಿಜ್ಞಾನಿ ಜಿ.ಬಿ. ವಿಶ್ವನಾಥ ಅವರು, ಹೆಚ್ಚಿನ ಇಳುವರಿ ನೀಡುವ ಭತ್ತ, ಸೋಯಾ ಅವರೆ, ಉದ್ದು ತಳಿಗಳ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ವಿಜ್ಞಾನಿ ಪ್ರವೀಣ ಯಡಹಳ್ಳಿ, ಮುಂಗಾರಿನಲ್ಲಿ ಬರುವ ಪ್ರಮುಖ ಬೆಳೆಗಳಾದ ಈರುಳ್ಳಿ, ಹಸಿರು ಬಟಾಣಿ, ಹೂಕೋಸು, ಬೆಂಡೆ ಹಾಗೂ ಕ್ಯಾಬೇಜ್ ಬೆಳೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಚಗಾಂವ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಭು ದೋಣಿ, ಸಿಬ್ಬಂದಿ ಮಲ್ಲೇಶ ನಾಯಕ, 200ಕ್ಕೂ ಹೆಚ್ಚು ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.