ADVERTISEMENT

ಅಥಣಿ: ಡಿಸಿಎಂ ಮನೆಯ ವಾರ್ಡಲ್ಲೇ ಕಾಣದ ಅಭಿವೃದ್ಧಿ

ಅಥಣಿಯ 11ನೇ ವಾರ್ಡ್‌ನಲ್ಲಿ ಸೌಲಭ್ಯಗಳಿಗೆ ಪರದಾಟ

ಪರಶುರಾಮ ನಂದೇಶ್ವರ
Published 4 ಮೇ 2021, 19:30 IST
Last Updated 4 ಮೇ 2021, 19:30 IST
ಅಥಣಿಯ 11ನೇ ವಾರ್ಡ್‌ನಲ್ಲಿ ಸಮರ್ಪಕ ರಸ್ತೆ ಮೊದಲಾದ ಸೌಲಭ್ಯಗಳಿಲ್ಲ
ಅಥಣಿಯ 11ನೇ ವಾರ್ಡ್‌ನಲ್ಲಿ ಸಮರ್ಪಕ ರಸ್ತೆ ಮೊದಲಾದ ಸೌಲಭ್ಯಗಳಿಲ್ಲ   

ಅಥಣಿ (ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮನೆ ಇರುವ ವಾರ್ಡ್‌ ನಂ.11ರಲ್ಲಿ ಅಭಿವೃದ್ಧಿ ಕಂಡುಬಂದಿಲ್ಲ. ಅಲ್ಲಿನ ನಿವಾಸಿಗಳು ವಿವಿಧ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಸಮಸ್ಯೆಗಳ ಸರಮಾಲೆಯೇ ಅಲ್ಲಿದೆ.

ಸವದಿ ಅವರ ಮನೆಯ ಪಕ್ಕದಲ್ಲಿರುವ ಮನೆಗಳ ಬಳಿ ಚರಂಡಿ ವ್ಯವಸ್ಥೆಯೇ ಇಲ್ಲ. ಕೊಳಚೆ ನೀರು ರಸ್ತೆಗಳು ಅಥವಾ ಮನೆಗಳ ಮುಂದೆಯೇ ಹರಿಯುತ್ತದೆ; ಕೆಲವೆಡೆ ಸಂಗ್ರಹಾಗಿರುತ್ತದೆ. ‘ನಿಮ್ಮ ಮನೆಯ ಕೊಳಚೆ ನೀರು ನಮ್ಮ ಮನೆ ಮುಂದೆ ಬಂದಿದೆ’ ಎಂದು ನಿವಾಸಿಗಳು ಪರಸ್ಪರ ಜಗಳ ಆಡುವುದು ಸಾಮಾನ್ಯ ಎನ್ನುವಂತಾಗಿ ಹೋಗಿದೆ! ಅನೈರ್ಮಲ್ಯದಿಂದಾಗಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಪರಿಣಾಮ ಸಾಂಕ್ರಾಮಿಕ ರೋಗಗಳ ಭೀತಿಯೂ ಇದೆ. ಸಮರ್ಪಕ ಚರಂಡಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಅದರಲ್ಲೂ ಮಳೆ ಬಂದಾಗ ಹಾಗೂ ಮಳೆಗಾಲದಲ್ಲಿ ಈ ಪ್ರದೇಶದ ಪರಿಸ್ಥಿತಿ ಹೇಳತೀರದು. ನೀರು ಹೊರಹಾಕಲು ಜನರು ಹರಸಾಹಸವನ್ನೇ ಪಡೆಬೇಕಾದ ಸ್ಥಿತಿ ತಪ್ಪಿಲ್ಲ. ಮಳೆಗಾಲ ಯಾಕಾದರೂ ಬರುತ್ತದೆಯೋ ಎಂದು ಸಂಕಟ ಪಡುವಂತಹ ಮಾತುಗಳು ಅಲ್ಲಿನವರಿಂದ ಕೇಳಿಬರುತ್ತದೆ.

ADVERTISEMENT

ವಾರ್ಡ್‌ನ ಬಹುತೇಕ ಕಡೆಗಳಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ. ಪುರಸಭೆಯವರನ್ನು ಕೇಳಿದರೆ, ‘ಇಲ್ಲಿ ಎರಡು ಮಾರ್ಗದ ಸಂಪರ್ಕವಿದೆ. ಆದ್ದರಿಂದ ಇಲ್ಲಿ ಬೀದಿ ದೀಪ ಅಳವಡಿಸಲು ಆಗುವುದಿಲ್ಲ. ಮೂರು ಮಾರ್ಗ ಇದ್ದರೆ ಮಾತ್ರ ಬೀದಿ ದೀಪಗಳನ್ನು ಕಲ್ಪಿಸಬಹುದು’ ಎನ್ನುತ್ತಾರೆ. ‘ಅದನ್ನು ಮಾಡಬೇಕಾದವರು ಯಾರು’ ಎಂಬ ಪ್ರಶ್ನೆಗೆ ‍ಪುರಸಭೆಯವರು ಎನ್ನುವ ಉತ್ತರ ಹೆಸ್ಕಾಂನವರಿಂದ ಬರುತ್ತಿದೆ. ಪುರಸಭೆಯವರು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅವರತ್ತ ಇವರು, ಇವರತ್ತ ಅವರು ಕೈತೋರುತ್ತಿದ್ದಾರೆ. ಇದರಿಂದ ನಾವು ತೊಂದರೆ ಅನುಭವಿಸುವಂತಾಗಿದೆ ಎನ್ನುವುದು ಸ್ಥಳೀಯರ ದೂರಾಗಿದೆ.

ಕೆಲವೆಡೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವೆಡೆ ಆಗಿಲ್ಲ. ವಿಶೇಷವೆಂದರೆ ಈ ವಾರ್ಡ್‌ನಲ್ಲಿ ಸವದಿ ಅವರಿಗೆ ಸಂಬಂಧಿಸಿದ ಕೆಲವು ಪ್ಲಾಟ್‌ಗಳಿವೆ. ಅಲ್ಲಿಯೂ ರಸ್ತೆಗಳಿಲ್ಲ. ಅದರಂತೆ ಅವರ ಮನೆ ಪಕ್ಕವೂ ಕಾಮಗಾರಿ ನಡೆದಿಲ್ಲ. ಮಳೆಗಾಲದಲ್ಲಿ ಸಾರ್ವಜನಿಕರು ಓಡಾಡುವುದಕ್ಕೆ ಪರದಾಡುತ್ತಾರೆ. ಕೆಲವು ಕಡೆಗಳಲ್ಲಿ ರಸ್ತೆಗಳು ಕೆಸರು ಗದ್ದೆಗಳಂತೆ ಆಗುತ್ತವೆ. ಜನರು ಸಂಚರಿಸಲು ಸರ್ಕಸ್ ಮಾಡಬೇಕಾದ ದುಃಸ್ಥಿತಿ ಇದೆ.

ಕೆಲವರು ಮನೆಗಳಿಗೆ ನೀರು ನುಗ್ಗದಂತೆ ನೋಡಿಕೊಳ್ಳಲು ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಹುತೇಕರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನವನ್ನು ಹಲವು ಬಾರಿ ಸೆಳೆದಿದ್ದರೂ ಪ್ರಯೋಜನವಾಗಿಲ್ಲ ಎನ್ನುವ ದೂರು ಸ್ಥಳೀಯರದು.

ಪ್ರತಿಕ್ರಿಯೆಗೆ ಪುರಸಭೆ ಅಧಿಕಾರಿ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.