ADVERTISEMENT

ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರ: 3 ವರ್ಷಗಳಿಂದ ಬಾರದ ಬಿಡಿಗಾಸು ಅನುದಾನ

ಇಮಾಮ್‌ಹುಸೇನ್‌ ಗೂಡುನವರ
Published 6 ಮಾರ್ಚ್ 2025, 5:43 IST
Last Updated 6 ಮಾರ್ಚ್ 2025, 5:43 IST
ಬೆಳಗಾವಿಯ ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕೈಗೊಂಡ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು
ಬೆಳಗಾವಿಯ ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕೈಗೊಂಡ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು   

ಬೆಳಗಾವಿ: ಇಲ್ಲಿನ ಶಿವಬಸವ ನಗರದ ಡಾ.ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರ ಅನುದಾನ ಕೊರತೆಯಿಂದ ಬಳಲುತ್ತಿದೆ. ಮೂರು ವರ್ಷಗಳಿಂದ ಸರ್ಕಾರ ಬಿಡಿಗಾಸು ಅನುದಾನ ಬಿಡುಗಡೆಗೊಳಿಸದ ಕಾರಣ, ಹೆಚ್ಚಿನ ಚಟುವಟಿಕೆ ಕೈಗೊಳ್ಳಲಾಗದೆ ಪರದಾಡುತ್ತಿದೆ!

ಈ ಭಾಗದ ಜನರಿಗೆ ಮೂಲ ವಿಜ್ಞಾನದ ಪರಿಕಲ್ಪನೆಗಳನ್ನು ತಿಳಿಸುವ ಜತೆಗೆ, ಮಕ್ಕಳಿಗೆ ಪ್ರಯೋಗ ಆಧಾರಿತ ಶಿಕ್ಷಣ ನೀಡುವುದು. ಸಂಶೋಧನೆಯಲ್ಲಿ ತೊಡಗಲು ಅವರಿಗೆ ಪ್ರೇರಣೆ ತುಂಬುವುದಕ್ಕಾಗಿ 1986ರಲ್ಲಿ ನಗರದಲ್ಲಿ ವಿಜ್ಞಾನ ಕೇಂದ್ರ ತಲೆ ಎತ್ತಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿ ರಾಜ್ಯ ವಿಜ್ಞಾನ ಪರಿಷತ್‌ ಇದನ್ನು ನಿರ್ವಹಣೆ ಮಾಡುತ್ತಿತ್ತು. ವಿವಿಧ ಚಟುವಟಿಕೆ ಕೈಗೊಳ್ಳಲು ಪರಿಷತ್ತಿಗೆ ಈ ಹಿಂದೆ ನಿಯಮಿತವಾಗಿ ಅನುದಾನ ಬರುತ್ತಿತ್ತು.

ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯ ವಿಜ್ಞಾನ ಪರಿಷತ್‌ಗೆ ಚುನಾವಣೆ ನಡೆದಿಲ್ಲ. ಅದಕ್ಕೆ ಆಡಳಿತ ಮಂಡಳಿ ಇಲ್ಲ. ಹಾಗಾಗಿ ಸರ್ಕಾರದಿಂದ ಅನುದಾನ ಬಾರದ್ದರಿಂದ ಕೇಂದ್ರವನ್ನು ಮುನ್ನಡೆಸುವುದೇ ಸವಾಲಾಗಿ ಪರಿಣಮಿಸಿದೆ.

ADVERTISEMENT

ಇಲ್ಲಿ ಭೌತವಿಜ್ಞಾನ ಮ್ಯೂಸಿಯಂ, ಗಣಿತ ಪ್ರಯೋಗಾಲಯ, ತಾರಾಲಯ, ಡಿಜಿಟಲ್‌ ಸ್ಟುಡಿಯೊ ಇದ್ದು, ಬೆಳಗಾವಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳು, ಬಿಇಡಿ ಪ್ರಶಿಕ್ಷಣಾರ್ಥಿಗಳು, ಸಂಶೋಧಕರು ಮತ್ತು ವಿಜ್ಞಾನ ಆಸಕ್ತರು ಭೇಟಿ ನೀಡುತ್ತಾರೆ.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಬೇಸಿಗೆ ವಿಜ್ಞಾನ ಶಿಬಿರ, ಅರಣ್ಯ ಚಾರಣ, ಪ್ರಕೃತಿ ಅಭಿಯಾನ, ಮಾಡುತ್ತ ಕಲಿ ಚಟುವಟಿಕೆ, ಕಡಿಮೆ ವೆಚ್ಚದಲ್ಲಿ ಮತ್ತು ವೆಚ್ಚ ರಹಿತವಾಗಿ ಉಪಕರಣಗಳ ತಯಾರಿಕೆ ಬಗ್ಗೆ ತರಬೇತಿ, ವಿಜ್ಞಾನ–ಗಣಿತ ಶಿಕ್ಷಕರಿಗೆ ತರಬೇತಿ, ವಿದ್ಯಾರ್ಥಿ–ವಿಜ್ಞಾನಿ ಸಂವಾದ, ವಿಜ್ಞಾನದ ಮಾದರಿಗಳ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆ, ಗ್ರಹಗಳು ಮತ್ತು ನಕ್ಷತ್ರಗಳ ವೀಕ್ಷಣೆ ಮತ್ತಿತರ ಚಟುವಟಿಕೆ ಕೈಗೊಳ್ಳಲಾಗುತ್ತಿದೆ.

ಆದರೆ, ಕೇಂದ್ರದಲ್ಲಿನ ವಿಜ್ಞಾನ ಉಪಕರಣ ಹಳೆಯದಾಗಿವೆ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಅವುಗಳನ್ನು ಮೇಲ್ದರ್ಜೆಗೇರಿಸಬೇಕಿದೆ. ಆಧುನಿಕ ತಂತ್ರಜ್ಞಾನವೂ ಇತ್ತ ಮುಖಮಾಡಬೇಕಿದ್ದು, ಡಿಜಿಟಲ್‌ ತಾರಾಲಯ ನಿರ್ಮಿಸಬೇಕೆಂಬ ಬಹುದಿನಗಳ ಬೇಡಿಕೆ ನನೆಗುದಿಗೆ ಬಿದ್ದಿದೆ.

ಒಬ್ಬರೇ ಸಿಬ್ಬಂದಿ: ಈ ಹಿಂದೆ ವಿಜ್ಞಾನ ಕೇಂದ್ರದಲ್ಲಿ ನಿರ್ದೇಶಕ, ಯೋಜನಾ ಸಹಾಯಕ, ಲೆಕ್ಕ ಸಹಾಯಕ, ಇಬ್ಬರು ಅಟೆಂಡರ್‌ ಸೇರಿದಂತೆ ಐವರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಹಂತ ಹಂತವಾಗಿ ಸಿಬ್ಬಂದಿ ಕಡಿತಗೊಳಿಸಲಾಗಿದ್ದು, ಈಗ ಯೋಜನಾ ಸಹಾಯಕರೊಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ರಜೆ ಮೇಲೆ ತೆರಳಿದರೆ, ಕೇಂದ್ರಕ್ಕೆ ಬೀಗ ಜಡಿಯುವ ಪರಿಸ್ಥಿತಿ ಇದೆ.

ಅಲ್ಲಮಪ್ರಭು ಸ್ವಾಮೀಜಿ
ಬೆಳಗಾವಿಯ ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕೈಗೊಂಡ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು
ನಮಗೆ ಲಭ್ಯವಿರುವ ಅವಕಾಶಕ್ಕೆ ಅನುಗುಣವಾಗಿ ಆರ್ಥಿಕ ನೆರವು ಒದಗಿಸಿ ವಿಜ್ಞಾನ ಕೇಂದ್ರ ಮುನ್ನಡೆಸುತ್ತಿದ್ದೇವೆ. ಸರ್ಕಾರದಿಂದಲೂ ಅನುದಾನ ಬಂದರೆ ಹೆಚ್ಚಿನ ಚಟುವಟಿಕೆ ಕೈಗೊಳ್ಳಬಹುದು
ಅಲ್ಲಮಪ್ರಭು ಸ್ವಾಮೀಜಿ ಅಧ್ಯಕ್ಷ ಬೆಳಗಾವಿ ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜ್ಯುಕೇಷನ್‌

ಅಸೋಸಿಯೇಷನ್‌ ಆಸರೆ

ಸರ್ಕಾರದ ಕಡೆಗಣನೆಗೆ ಒಳಗಾಗಿರುವ ವಿಜ್ಞಾನ ಕೇಂದ್ರಕ್ಕೆ ಬೆಳಗಾವಿ ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜ್ಯುಕೇಷನ್‌ ಆಸರೆಯಾಗಿದೆ. ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಅಸೋಸಿಯೇಷನ್‌ ಕೇಂದ್ರಕ್ಕೆ ಎಲ್ಲ ರೀತಿಯ ನೆರವು ಒದಗಿಸುತ್ತಿದೆ. ವಿವಿಧ ಚಟುವಟಿಕೆಗೆ ತಗುಲುವ ಆರ್ಥಿಕ ವೆಚ್ಚವನ್ನು ತಾನೇ ಭರಿಸುತ್ತಿದೆ. ಸ್ವಚ್ಛತೆ ಭದ್ರತಾ ಕೆಲಸಕ್ಕಾಗಿ ನಾಲ್ವರು ಸಿಬ್ಬಂದಿಯನ್ನೂ ನಿಯೋಜಿಸಿ ಅವರಿಗೆ ವೇತನ ಪಾವತಿಸುತ್ತಿದೆ.

‘ಸ್ಟೀಮ್‌–ಎಚ್‌’ ಕೇಂದ್ರ ಆರಂಭ

ವಿದ್ಯಾರ್ಥಿಗಳಿಗೆ ವಿಜ್ಞಾನ ತಂತ್ರಜ್ಞಾನ ಎಂಜಿನಿಯರಿಂಗ್‌ ಕಲೆ ಗಣಿತ ಹಾಗೂ ಮಾನವೀಯತೆ ಕುರಿತು ತರಬೇತಿಗೆ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸಲು ಅಸೋಸಿಯೇಷನ್‌ನಿಂದ ಇತ್ತೀಚೆಗೆ ‘ಸ್ಟೀಮ್–ಎಚ್’ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ರೋಬೋಟಿಕ್ಸ್‌ ಕೃತಕ ಬುದ್ಧಿಮತ್ತೆ ಬಾಹ್ಯಾಕಾಶ ತಂತ್ರಜ್ಞಾನ ಮರುಬಳಸಬಹುದಾದ ಶಕ್ತಿಯ ಮೂಲಗಳು ಮತ್ತಿತರ ವಿಷಯಗಳ ಬಗ್ಗೆ ವಿಜ್ಞಾನಿಗಳು ಹಾಗೂ ಸಂಶೋಧಕರಿಂದ ತರಬೇತಿ ಕೊಡಿಸಲು ಯೋಜಿಸಲಾಗಿದೆ. ಇಲ್ಲಿ ತರಬೇತಿ ಸಂಶೋಧನೆಗೆ ಅವಕಾಶ ಕೋರಿ 2 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಪರೀಕ್ಷೆ ನಡೆಸಿ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸರ್ಕಾರದಿಂದ ಅನುದಾನ ಬಂದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.