ADVERTISEMENT

ಕೂಡಲಸಂಗಮ ಶ್ರೀ ಬಗ್ಗೆ ಹಗುರ ಹೇಳಿಕೆ ಸಲ್ಲ: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 10:20 IST
Last Updated 24 ಫೆಬ್ರುವರಿ 2021, 10:20 IST
ಶಾಸಕಿ ಲಕ್ಷ್ಮಿ ಹೆಬ್ಬಾಳಕರ
ಶಾಸಕಿ ಲಕ್ಷ್ಮಿ ಹೆಬ್ಬಾಳಕರ    

ಬೆಳಗಾವಿ: ‘ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಬಗ್ಗೆ ಸಚಿವ ಮುರುಗೇಶ ನಿರಾಣಿ ಹಗುರವಾಗಿ ಮಾತನಾಡಬಾರದು’ ಎಂದು ಕೆಪಿಸಿಸಿ ವಕ್ತಾರೆಯೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಕೆ ನೀಡಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸ್ವಾಮೀಜಿ ಸ್ವಾರ್ಥಕ್ಕೆ ಹೋರಾಡುತ್ತಿಲ್ಲ. ಸಮಾಜದ ಜನರ ಒಳಿತಿಗೆ ಮೀಸಲಾತಿಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ಸಚಿವರು ಹಾಗೂ ಸರ್ಕಾರ ಅರಿಯಬೇಕು’ ಎಂದರು.

‘ಸಮಾಜದ ಈ ಹೋರಾಟ ಕಾಂಗ್ರೆಸ್‌ ಪ್ರಾಯೋಜಕತ್ವದ್ದಲ್ಲ. ಪಕ್ಷಾತೀತವಾದುದು. ಸಚಿವ ನಿರಾಣಿ ಅವರು ಸಮಾಜದ ಪ್ರತಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಭಾಗಿಯಾಗಿ ಹಿರಿಯಣ್ಣನಂತಿದ್ದರು. ಈಗ, ಸ್ವಾಮೀಜಿಗಳ ಬಗ್ಗೆ ಸುಳ್ಳು ಆರೋಪ ಮಾಡುವುದು‌ ಸರಿಯಲ್ಲ. ಬಸವ ಜಯ ಮೃತ್ಯುಂಜಯ ಶ್ರೀಗಳು ಲಿಂಗಾಯತ ಸಮಾಜಕ್ಕೆ ಕಿರೀಟವಿದ್ದಂತೆ. ಅವರು ಯಾರ ಕೈಯಲ್ಲೂ ಇಲ್ಲ. ಆದರೆ, ನಮ್ಮ ಮೀಸಲಾತಿ ಹೋರಾಟವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಅದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರು ಶ್ರೀರಾಮಮಂದಿರ ವಿಷಯವಾಗಿ ನೀಡಿದ ಹೇಳಿಕೆಯನ್ನೂ ಬಿಜೆಪಿಯವರು ಧರ್ಮದ ರಾಜಕಾರಣಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ತಿಳಿಸಿದರು.

‘ಸಮಾಜದ ನಾಯಕ ವಿಜಯಾನಂದ ಕಾಶಪ್ಪನವರ ಕುಟುಂಬ ಸಮೇತ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸಮಾಜದ ಮುಖಂಡರಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆಯೇ ಹೊರತು ಕಾಂಗ್ರೆಸ್‌ನಿಂದಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.