ADVERTISEMENT

ಬೆಳಗಾವಿ: ಗೌಂಡವಾಡ ಗುಂಪು ಸಂಘರ್ಷಕ್ಕೆ ಕಾರಣವಾಗಿದ್ದು 27 ಎಕರೆ ಜಮೀನು

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 8:53 IST
Last Updated 19 ಜೂನ್ 2022, 8:53 IST
land issues communal violence in Goundwad belagavi district murder case police enquiry
land issues communal violence in Goundwad belagavi district murder case police enquiry    

ಬೆಳಗಾವಿ: ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ್ದು ಎನ್ನಲಾದ 27 ಎಕರೆ ಜಮೀನು ಸಂಘರ್ಷಕ್ಕೆ ಕಾರಣವಾಗಿದೆ.

'ಕಾಲಭೈರವನಾಥ, ಲಕ್ಷ್ಮಿ, ಬಸವೇಶ್ವರ ದೇವಸ್ಥಾನಗಳಿಗೆ ಸಂಬಂಧಿಸಿದ ಈ ಜಮೀನು ಪೂರ್ವಜರ ಕಾಲದಿಂದಲೂ ಇದೆ. ಬೇರೆ ಬೇರೆ ಕಡೆ ಇರುವ ಜಮೀನನ್ನು ಬೀಳು ಬಿಡುವ ಬದಲು ಕೆಲವರಿಗೆ ಮೇವು ಬೆಳೆಯಲು ಅವಕಾಶ ನೀಡಲಾಗಿತ್ತು. ಬರಬರುತ್ತ ಅವರು ಜಮೀನನ್ನು ತಮ್ಮಂತೆ ಮಾಡಿಕೊಂಡರು. ಸುಮಾರು ಎಂಟು ವರ್ಷಗಳ ಹಿಂದೆ ಇದರ ಬಗ್ಗೆ ತಕರಾರು ಶುರುವಾಯಿತು. ಐದು ವರ್ಷಗಳ ಹಿಂದೆ ಜಮೀನು ದೇವಸ್ಥಾನದ್ದು ಎಂದು ಗ್ರಾಮ ಪಂಚಾಯಿತಿ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು' ಎಂದು ಗ್ರಾಮದ ಹಿರಿಯರೂಬ್ಬರು ಮಾಹಿತಿ ನೀಡಿದರು.

'ಇಷ್ಟೆಲ್ಲ ಆದ ಬಳಿಕವೂ ಕೆಲವರು ಜಮೀನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಇದನ್ನು ಪ್ರಶ್ನಿಸಿ ಸತೀಶ ಪಾಟೀಲ (ಕೊಲಾಯಾದವರು) ಹೋರಾಟ ನಡೆಸಿದ್ದರು. ಮೂರು ವರ್ಷಗಳ ಹಿಂದೆ ಪ್ರಕರಣ ನ್ಯಾಯಾಲಯದ ಕಟಕಟೆ ಹತ್ತಿತು. ದೇವಸ್ಥಾನ ಜಮೀನು ಅತಿಕ್ರಮಣ ತೆರವು ಮಾಡಬೇಕು ಎಂದು ಸತೀಶ ಪ್ರಕರಣ ದಾಖಲಿಸಿದ್ದರು. ಇದೇ ವಿಷಯವಾಗಿ ಅವರ ಮೇಲೆ ಈ ಹಿಂದೆ ಕೂಡ ಎರಡು ಬಾರಿ ಹಲ್ಲೆಯಾಗಿತ್ತು. ಶನಿವಾರ ರಾತ್ರಿ ಅವರ ಕೊಲೆಯಿಂದ ಪ್ರಕರಣ ಮತ್ತಷ್ಟು ಸಂಘರ್ಷಕ್ಕೆ ಆಸ್ಪದ ನೀಡಿದೆ' ಎಂದೂ ಅವರು ಹೇಳಿದರು.

ಜೂನ್ 21ರಂದು ವಿಚಾರಣೆ: ವಿವಾದಕ್ಕೆ ಕಾರಣವಾದ ಜಮೀನು ಕುರಿತು ಇದೇ ಮಂಗಳವಾರ (ಜೂನ್ 21) ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿತ್ತು. ಹೀಗಾಗಿ, ಶನಿವಾರ ಸಂಜೆ 6ರಿಂದಲೇ ಪರ ಹಾಗೂ ವಿರೋಧಿ ಗುಂಪುಗಳ ಮಧ್ಯೆ ತಕರಾರು ನಡೆದಿತ್ತು.

ADVERTISEMENT

ರಾತ್ರಿ 10ರ ವೇಳೆಗೆ ಸುಮಾರು 150ಕ್ಕೂ ಹೆಚ್ಚು ಜನ ದೇವಸ್ಥಾನದ ಮುಂದೆ ಸೇರಿದರು. ಹಲವರ ಕೈಯಲ್ಲಿ ಮಾರಕಾಸ್ತ್ರಗಳಿದ್ದವು. ಈ ವೇಳೆ ಸ್ಥಳದಲ್ಲಿ ಬೆರಳೆಣಿಕೆಯಷ್ಟು ಪೊಲೀಸರು ಮಾತ್ರ ಇದ್ದರು. ಅವರಿಗೂ ಮಚ್ಚು ತೋರಿಸಿದ ಆರೋಪಿಗಳು ದೂರ ಹೋಗುವಂತೆ ತಾಕೀತು ಮಾಡಿದರು. ಸತೀಶ ಅವರನ್ನು ಮನೆಯಿಂದ ಹೊರತಂದು ಮಾರಕಾಸ್ತ್ರಗಳಿಂದ ಕೊಚ್ಚಿದರು. ಬಿಡಿಸಲು ಬಂದ ಪತ್ನಿ ಸ್ನೇಹಾ ಅವರನ್ನು ಎಳೆದಾಡಿದರು. ಪೊಲೀಸ್ ವಾಹನಗಳು ಸ್ಥಳಕ್ಕೆ ಬಂದಾಗ ಸತೀಶ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಕೆಎಲ್ಇ ಆಸ್ಪತ್ರೆಗೆ ಸಾಗಿಸಲಾಯಿತು. ಅದರ ಬೆನ್ನಿಗೆ ಗುಂಪೊಂದು ಹಿಲಾಲುಗಳನ್ನು ತಂದು ಬೆಂಕಿ ಹಚ್ಚಿತು. ಭತ್ತದ ಹುಲ್ಲನ್ನು ವಾಹನಗಳ ಮೇಲೆ ಎಸೆದು ಬೆಂಕಿ ಹಚ್ಚಿತು' ಎಂದು ಪೊಲೀಸರು ಮಾಹಿತಿ ನೀಡಿದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.