ಕಾಗವಾಡ: ಮತ ಕ್ಷೇತ್ರದ ಉತ್ತರ ಭಾಗದ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ನೀರು ಒದಗಿಸುವ ಪ್ರಾಯೋಗಿಕ ಕಾರ್ಯಕ್ಕೆ ಶಾಸಕರಾದ ರಾಜು ಕಾಗೆ, ಶಾಸಕ ಲಕ್ಷ್ಮಣ ಸವದಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಐನಾಪೂರದ ಜಾಕ್‌ವೆಲ್‌ನಲ್ಲಿ ಭಾನುವಾರ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯ ಮೋಟಾರ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮದಭಾವಿ ಗ್ರಾಮದ ಹೊರವಲಯದಲ್ಲಿ ಕಾಲುವೆ ಮೂಲಕ ನೀರಿ ಹರಿಯುವುದನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಶಾಸಕ ರಾಜು ಕಾಗೆ, ‘ಪ್ರಾಯೋಗಿಕವಾಗಿ ಒಂದು ಪಂಪ್ ಅನ್ನು ಆರಂಭಿಸಿ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಇದರಿಂದ ಮೊದಲನೆ ಹಂತದ ಸುಮಾರು 10 ಸಾವಿರ ಎಕರೆ ಜಮೀನುಗಳಿಗೆ ಅನುಕೂಲವಾಗಲಿದೆ’ ಎಂದರು.
‘ಕಾಮಗಾರಿ ಪೂರ್ಣಗೊಳಿಸಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯೋಜನೆಗೆ ಚಾಲನೆ ಕೊಡಿಸಲಾಗುವುದು’ ಎಂದು ಹೇಳಿದರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ಶಾಸಕ ರಾಜು ಕಾಗೆಯವರ ಸತತ ಪ್ರಯತ್ನದ ಫಲವಾಗಿಯೇ ಖೀಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿದೆ’ ಎಂದು ತಿಳಿಸಿದರು.
ಮುಖಂಡರಾದ ಅರುಣ ಗಾಣಿಗೇರ, ಸುರೇಶ ಅಡಿಶೇರಿ, ಸುರೇಶ ಗಾಣಿಗೇರ, ಸೂಪರಿಂಟೆಂಡೆಂಟ್ ಎಂಜಿನಿಯರ್ ನಾಗೇಶ, ಇಇ ಪ್ರವೀಣ ಹುಣಸಿಕಟ್ಟಿ, ಎಇಇ ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ವಿನಾಯಕ ಬಾಗಡಿ, ದತ್ತಾ ವಾಸ್ಟರ್ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.