ADVERTISEMENT

‘ನಟನೆ ಗೊತ್ತಿದ್ದರೆ ಉತ್ತಮ ನಾಟಕಕಾರರಾಗಬಹುದು’

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 11:31 IST
Last Updated 22 ಜುಲೈ 2019, 11:31 IST

ಬೆಳಗಾವಿ: ‘ನಮ್ಮೊಳಗೆ ನಟನಿದ್ದಾಗ ಮಾತ್ರ ಉತ್ತಮ ನಾಟಕಕಾರನಾಗಲು, ಅತ್ಯುತ್ತಮ ನಾಟಕಗಳನ್ನು ರಚಿಸಲು ಸಾಧ್ಯ. ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರರಲ್ಲಿ ನಟನಿದ್ದ ಕಾರಣವೇ ಅವರು ಅತ್ಯುತ್ತಮ ನಾಟಕಕಾರರಾಗಲು ಸಾಧ್ಯವಾಯಿತು’ ಎಂದು ನಾಟಕಕಾರ ಹೂಲಿ ಶೇಖರ ಹೇಳಿದರು.

ಇಲ್ಲಿನ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗದಿಂದ ಈಚೆಗೆ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ‘ನಾಟಕ ರಂಗದ ಸ್ವಾನುಭವಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ನಾನು ಕಲಿತದ್ದು ಬೆಳಗಾವಿಯಲ್ಲೇ. ಕವಿ ಎಸ್.ಡಿ. ಇಂಚಲ ಗುರುವಾಗಿದ್ದರು. ದೌತಿಯಲ್ಲಿಯ ಮಸಿಯಲ್ಲಿ ಅದ್ದಿ ಗಲಗದಿಂದ ಬರೆಯುತ್ತಿದ್ದೆ. ಮಸಿ ಕೊಂಡುಕೊಳ್ಳಲಾಗದಂತಹ ಬಡತನವಿತ್ತು. ಆಗ, ಇಂಚಲ ಅವರು ಒಂದು ಮಸಿದೌತಿ ಹಾಗೂ ಗಲಗನ್ನು ಕೊಡಿಸಿದ್ದರು. ಅವರ ಆಶೀರ್ವಾದದಿಂದಾಗಿ ಇಂದಿನವರೆಗೆ 6ಲಕ್ಷ ಪುಟಗಳಿಗಿಂತಲೂ ಹೆಚ್ಚು ಸಾಹಿತ್ಯ ರಚನೆ ಮಾಡಿದ್ದೇನೆ’ ಎಂದು ನೆನೆದರು.

ADVERTISEMENT

‘ಚುಟುಕು ಸಾಹತ್ಯ ಬೆಳೆದ, ಬೆಳೆಯಬೇಕಾದ ಬಗೆ’ ವಿಷಯ ಕುರುತು ಮಾತನಾಡಿದ ಜರಗನಹಳ್ಳಿ ಶಿವಶಂಕರ, ‘ಬೀಜದಲ್ಲಿ ವೃಕ್ಷ ಅಡಗಿರುವಂತೆ ಹನಿಗವನಗಳು ಇರುತ್ತವೆ. ಹನಿಗವನ, ಚುಟುಕುಗಳು ಸಣ್ಣದಾಗಿದ್ದರೂ ಅದರಲ್ಲಿ ಹಿರಿದಾದ ಅರ್ಥ ತುಂಬಿರುತ್ತದೆ’ ಎಂದರು.

‘ಕವಿಗೆ ತಾಳ್ಮೆ ಬೇಕು. ಆಗ ಮಾತ್ರ ಏನನ್ನಾದರೂ ಸಾಧಿಸಬಹುದು. ಪ್ರಶಸ್ತಿ, ಪುರಸ್ಕಾರಗಳಿಗಾಗಿಯೇ ಬರವಣಿಗೆ ಮಾಡಬಾರದು’ ಎಂದು ತಿಳಿಸಿದರು.

ಸಂವಾದದಲ್ಲಿ ಗುಂಡೇನಟ್ಟಿ ಮಧುಕರ, ಆರ್.ಬಿ. ಬನಶಂಕರಿ, ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ, ಬಾಬಾ ಸಾಹೇಬ, ರವಿ ಭಜಂತ್ರಿ ಪಾಲ್ಗೊಂಡಿದ್ದರು. ಕ್ರಿಯಾಶೀಲ ಬಳಗದ ಪದಾಧಿಕಾರಿಗಳಾದ ದುರದುಂಡಯ್ಯ ಭಾವಿಮನಿ, ಕೆ.ವಿನಯ ಹಾಗೂ ಸುಭಾಸ ಏಣಗಿ, ಸ.ರಾ. ಸುಳಕೂಡೆ, ಜ್ಯೋತಿ ಬದಾಮಿ, ಗುರುಸಿದ್ದಯ್ಯ ಹಿರೇಮಠ, ಬಸವರಾಜ ಸುಣಗಾರ, ಉಮಾ ಅಂಗಡಿ, ಎಂ.ಎಫ್. ಸುಬ್ಬಾಪುರಮಠ, ರಾಜು ಮಠಪತಿ ಇದ್ದರು.

ಪ್ರೊ.ಎಂ.ಎಸ್. ಇಂಚಲ ಉದ್ಘಾಟಿಸಿದರು. ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸರ್ವಮಂಗಳಾ ಅರಳಿಮಟ್ಟಿ ಸ್ವಾಗತಿಸಿದರು. ಅಶೋಕ ಮಳಗಲಿ ನಿರೂಪಿಸಿದರು. ಕೆ. ಮಲ್ಲಿಕಾರ್ಜುನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.