ADVERTISEMENT

ವಿಧಾನಪರಿಷತ್‌ ಚುನಾವಣೆ: ಸಹೋದರನಿಗೆ ಟಿಕೆಟ್‌ ಕೇಳಿದ ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 14:41 IST
Last Updated 13 ನವೆಂಬರ್ 2021, 14:41 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಗೋಕಾಕ (ಬೆಳಗಾವಿ): ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಸಹೋದರ ಲಖನ್ ಜಾರಕಿಹೊಳಿ ಅವರನ್ನು 2ನೇ ಅಭ್ಯರ್ಥಿಯನ್ನಾಗಿ ಘೋಷಿಸಿ, ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಕೊಡಬೇಕು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೋರಿದರು.

ಹೊರವಲಯದ ಗೋಕಾಕ ಸಪ್ಲೈಯರ್ಸ್‌ ಸಭಾಭವನದಲ್ಲಿ ಶನಿವಾರ ನಡೆದ ಬಿಜೆಪಿ ಅರಭಾವಿ ಮಂಡಳದ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

‘ಲಖನ್‌ಗೆ ಪಕ್ಷವು ಅವಕಾಶ ಕಲ್ಪಿಸಿಕೊಟ್ಟಲ್ಲಿ ಬಿಜೆಪಿಯಿಂದ ನಿಶ್ಚಿತವಾಗಿಯೂ ಎರಡೂ ಸ್ಥಾನಗಳನ್ನು ಗೆಲ್ಲಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘2019ರಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಲಖನ್ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಬಳಿಕ ಬದಲಾದ ಪರಿಸ್ಥಿತಿಯಲ್ಲಿ ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಪ್ರಚಾರ ನಡೆಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನು ಪರಿಗಣಿಸಬೇಕು’ ಎಂದು ತಮ್ಮನ ಪರವಾಗಿ ಬ್ಯಾಟ್ ಮಾಡಿದರು.

‘ಬಿಜೆಪಿಯ ಮೊದಲನೇ ಅಭ್ಯರ್ಥಿಯಾಗಿ ಮಹಾಂತೇಶ ಕವಟಗಿಮಠ ಸ್ಪರ್ಧೆ ಬಹುತೇಕ ಖಚಿತವಾದಂತಾಗಿದೆ. ಲಖನ್ ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯದಿಂದ ಇದ್ದಾರೆ. ಇದನ್ನೆಲ್ಲ ಗಮನಿಸಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು’ ಎಂದು ಕೋರಿದರು.

ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.