ADVERTISEMENT

ಬೆಳಗಾವಿ: ಆನೆಗಳ ಕಣ್ಣಿಗೆ ಬೀಳದ ಚಿರತೆ ಟ್ರ್ಯಾ‍ಪ್‌ ಕ್ಯಾಮೆರಾದಲ್ಲಿ ಸೆರೆ

ಎರಡನೇ ದಿನವೂ ಕಾರ್ಯಾಚರಣೆಗೆ ಹೆಜ್ಜೆ ಹಾಕಿದ ಅರ್ಜುನ, ಆಲಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 11:08 IST
Last Updated 25 ಆಗಸ್ಟ್ 2022, 11:08 IST
ಬೆಳಗಾವಿಯ ಗಾಲ್ಫ್‌ ಮೈದಾನದ ಪೊದೆಯಲ್ಲಿ ಅಳವಡಿಸಿದ ಟ್ರ್ಯಾಪ್‌ ಕ್ಯಾಮೆರಾದಲ್ಲಿ ಬುಧವಾರ ರಾತ್ರಿ ಸೆರೆಯಾದ ಚಿರತೆ ಚಿತ್ರ
ಬೆಳಗಾವಿಯ ಗಾಲ್ಫ್‌ ಮೈದಾನದ ಪೊದೆಯಲ್ಲಿ ಅಳವಡಿಸಿದ ಟ್ರ್ಯಾಪ್‌ ಕ್ಯಾಮೆರಾದಲ್ಲಿ ಬುಧವಾರ ರಾತ್ರಿ ಸೆರೆಯಾದ ಚಿರತೆ ಚಿತ್ರ   

ಬೆಳಗಾವಿ: ಇಲ್ಲಿನ ಗಾಲ್ಫ್‌ ಮೈದಾನದ ಸುತ್ತಲಿನ ಪೊದೆಯಲ್ಲಿ ಅವಿತ ಚಿರತೆ ಪತ್ತೆಗೆ ಗುರುವಾರ ಮಧ್ಯಾಹ್ನದಿಂದ ಮತ್ತೆ ಆನೆಗಳನ್ನು ಬಳಸಿ ಕಾರ್ಯಾಚರಣೆ ಆರಂಭಿಸಲಾಯಿತು. ಬುಧವಾರ ಆರು ತಾಸು ಕಾರ್ಯಾಚರಣೆ ನಡೆಸಿದರೂ ಸುಳಿವು ನೀಡದ ಚಿರತೆ, ರಾತ್ರಿ 10.20ರ ಸುಮಾರಿಗೆ ಟ್ರ್ಯಾಪ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗುರುವಾರ ಅದೇ ಮಾರ್ಗ ಅನುಸರಿಸಿ ಕಾರ್ಯಾಚರಣೆ ಶುರು ಮಾಡಲಾಯಿತು. ಈ ಪ್ರದೇಶದಲ್ಲಿ ದಟ್ಟ ಪೊದೆ, ದಪ್ಪಗಿಡಗಳು ಇರುವುದರಿಂದ ಕಾರ್ಯಾಚರಣೆಗೆ ಅಡ್ಡಯಾಗಿತ್ತು. ಎರಡು ಜೆಸಿಬಿ ಬಳಸಿ ಅವುಗಳನ್ನು ತೆರವು ಮಾಡಲಾಯಿತು.

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ತರಬೇತಿ ಶಿಬಿರದಿಂದ ಬಂದ ಅರ್ಜುನ ಹಾಗೂ ಆಲಿ ಆನೆಗಳ ಮೇಲೆ ಕುಳಿತ ಮಾವುತ, ಶಾರ್ಪ್‌ ಶೂಟರ್ ಸಂಚಾರ ಆರಂಭಿಸಿದರು. ಅವರ ಹಿಂದೆ ಕಾರ್ಯಾಚರಣೆಯ ಪರಿಣತಿ ಹೊಂದಿದ 10 ಸಿಬ್ಬಂದಿ, ವೈದ್ಯರು ಹಾಗೂ ಅರಿವಳಿಕೆ ತಜ್ಞರೂ ಸಾಗಿದರು.

ADVERTISEMENT

ಕಳೆದ 21 ದಿನಗಳಿಂದ ಚಿರತೆ ಓಡಾಡಿದ ಪ್ರದೇಶಗಳನ್ನು ಆಧಾರವಾಗಿ ಇಟ್ಟುಕೊಂಡು ಅಧಿಕಾರಿಗಳು ನಕ್ಷೆ ಸಿದ್ಧ ಮಾಡಿಕೊಂಡಿದ್ದಾರೆ. ಈವರೆಗೆ ಮಾಡಿದ ಎಲ್ಲ ಕಸರತ್ತುಗಳೂ ಫಲ ನೀಡಿಲ್ಲ. ಈ ಪ್ರದೇಶವು 270 ಎಕರೆ ವ್ಯಾಪ್ತಿ ಹೊಂದಿದ್ದು, ದಟ್ಟ ಪೊದೆ– ಮರಗಿಡಗಳು ಬೆಳೆದಿವೆ. ಅಡಗಿಕೊಳ್ಳಲು ಚಿರತೆಗೆ ಸೂಕ್ತ ಸ್ಥಳವಾಗಿದೆ. ಸಿಬ್ಬಂದಿ ಓಡಾಡಲು ಆಗದಂಥ ಸ್ಥಿತಿ ಇದೆ. ಹೀಗಾಗಿ, ಅದರ ಸೆರೆ ವಿಳಂಬವಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.

ಭಿನ್ನವಾಗಿದೆ ಈ ಚಿರತೆ ಜೀವನ ಶೈಲಿ:ಸಾಮಾನ್ಯವಾಗಿ ಚಿರತೆಗಳು ಒಂದು ರಾತ್ರಿ ಕಳೆದ ಬಳಿಕ ಇನ್ನೊಂದು ಸ್ಥಳಕ್ಕೆ ಹೋಗುತ್ತವೆ. ತೀರ ಇಕ್ಕಟ್ಟಾದ ಜಾಗದಲ್ಲಿ ಸಿಲುಕಿದಾಗ ಮಾತ್ರ ಅವುಗಳ ಸಂರಕ್ಷಣಾ ಕಾರ್ಯಾಚಣೆ ಮಾಡುವುದು ಅನಿವಾರ್ಯ. ಬಹುಪಾಲು ಚಿರತೆಗಳಿಗೆ ನಾಯಿಗಳೇ ನೆಚ್ಚಿನ ಆಹಾರ. ಆದರೆ, ಬೆಳಗಾವಿಯಲ್ಲಿ ಅವಿತ ಚಿರತೆ ಜೀವನ ಶೈಲಿ, ಆಹಾರ ಪದ್ಧತಿ ತುಸು ಭಿನ್ನವಾಗಿದೆ ಎಂದು ಪ್ರಭಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪ ‘‍ಪ್ರಜಾವಾಣಿ’ಗೆ ತಿಳಿಸಿದರು.

ಈ ಮೈದಾನದ ಸುತ್ತಲಿನ ಪ್ರದೇಶದಲ್ಲಿ ಸಿಗುವ ಹಂದಿಗಳನ್ನು ಚಿರತೆ ಬೇಟೆಯಾಡಿದೆ. ಸಾಕಷ್ಟು ಹಂದಿ, ನಾಯಿ, ಮೊಲ ಹಾಗೂ ಇತರ ಪ್ರಾಣಿಗಳೂ ಅಲ್ಲಿ ಹೆಚ್ಚು ಇವೆ. ನವಿಲುಗಳ ಸಂಖ್ಯೆಯೂ ಹೆಚ್ಚಾಗಿದೆ. ದೂರದಲ್ಲಿ ಕಸಾಯಿಖಾನೆ ಇದ್ದು ಅಲ್ಲಿನ ತ್ಯಾಜ್ಯಕ್ಕಾಗಿ ನಾಯಿಗಳು ಹೆಚ್ಚಾಗಿ ಹೋಗುತ್ತವೆ. ಹೀಗಾಗಿ, ಚಿರತೆಗೆ ಯಥೇಚ್ಚವಾಗಿ ಆಹಾರ ಲಭ್ಯವಾಗುತ್ತಿರುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಅಂದಾಜಿಸಿದ್ದಾರೆ.

‘ಐದು ವರ್ಷ ವಯಸ್ಸಿನ ಈ ಚಿರತೆ ಬೆಳಗಾವಿ ಸುತ್ತಲಿನ ಅರಣ್ಯ ಪರಿಸರದಲ್ಲೇ ಬೆಳದಿರುವ ಸಾಧ್ಯತೆ ಇದೆ. ಹೀಗಾಗಿ, ಇಲ್ಲಿಂದ ಕದಲಲು ಸಿದ್ಧವಿಲ್ಲ’ ಎಂದೂ ಪರಿಣತರ ತಂಡದವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.