ADVERTISEMENT

5 ದಿನದಿಂದ ಬೆಳಗಾವಿಯಲ್ಲೇ ಉಳಿದ ಚಿರತೆ; ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿತ್ರ ಸೆರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 8:39 IST
Last Updated 9 ಆಗಸ್ಟ್ 2022, 8:39 IST
   

ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನದ ಮರಗಳ ಪೊದರಿನಲ್ಲಿ ಕಳೆದ ಐದು ದಿನಗಳಿಂದ ಅವಿತುಕೊಂಡ ಚಿರತೆಯ ಚಿತ್ರ ಸೋಮವಾರ ರಾತ್ರಿ ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಂಥದ್ದೇ ಚಿತ್ರ ಭಾನುವಾರ ರಾತ್ರಿ ಕೂಡ ಸೆರೆಯಾದ ಬಗ್ಗೆ ಸೋಮವಾರ ಇಡೀ ದಿನ ಗೊಂದಲ ಮೂಡಿತ್ತು. ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾದಲ್ಲಿ ಭಾನುವಾರವೇ ಚಿರತೆ ಇರುವುದು ಕಂಡಿದೆ ಎಂದು ಹಲವರು ಚಿತ್ರ ಹರಿಬಿಟ್ಟಿದ್ದರು. ಆದರೆ, ಅದು ನಕಲಿ ಚಿತ್ರ ಎಂದು ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದರು.

ಆದರೆ, ಸೋಮವಾರ ತಾವು ಅಳವಡಿಸಿದ ಕ್ಯಾಮೆರಾದಲ್ಲಿ ಗಾಲ್ಫ್ ಮೈದಾನದಲ್ಲಿ ಚಿರತೆ ಫೋಟೊ ಸೆರೆಯಾಗಿದ್ದು ನಿಜ. ಈ ಚಿರತೆ ಇನ್ನೂ ನಗರದೊಳಗೇ ಓಡಾಡುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ರಾಕೇಶ್ ತಿಳಿಸಿದ್ದಾರೆ.

ADVERTISEMENT

ಜಿಲ್ಲಾ ಅರಣ್ಯಾಧಿಕಾರಿ ಎಚ್.ಎಸ್. ಅಂಥೋನಿ, ಎಸಿಎಫ್ ಮಲ್ಲಿನಾಥ ಕುಸನಾಳ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಹಗಲಿರುಳು ಶೋಧ ನಡೆಸಿದ್ದಾರೆ. ಅರಿವಳಿಕೆ ಚುಚ್ಚುಮದ್ದು ನೀಡುವ ತಜ್ಞರು, ಪಶು ವೈದ್ಯರೂ ಈ ತಂಡದಲ್ಲಿದ್ದಾರೆ.

ಜಾಧವ ನಗರ, ಹನುಮಾನ್ ನಗರ, ಗಾಲ್ಫ್ ಮೈದಾನದ ಸುತ್ತಮುತ್ತ 16 ಟ್ರ್ಯಾಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮನೆಗಳ ಸಿಸಿಟಿವಿ ಕ್ಯಾಮೆರಾಗಳನ್ನೂ ಪರಿಶೀಲಿಸಲಾಗುತ್ತಿದೆ. ಹಲವು ಕಡೆ ಬೋನುಗಳನ್ನೂ ಇಡಲಾಗಿದೆ.

ಸೋಮವಾರ ಇಡೀ ದಿನ ಧಾರಾಕಾರ ಮಳೆ ಸುರಿದ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.

ಚಿರತೆಯ ಚಲನ ವಲನ ಈಗ ನಿಖರವಾಗಿ ಗೊತ್ತಾಗಿದೆ. ಆದಷ್ಟು ಶೀಘ್ರ ಸೆರೆ ಹಿಡಿಯಲಾಗುವುದು. ಜನ ಆತಂಕ ಪಡಬಾರದು ಎಂದು ರಾಕೇಶ್ ತಿಳಿಸಿದ್ದಾರೆ.

ಗಾಲ್ಫ್ ಮೈದಾನದ ಆಸುಪಾಸು ಯಾರೂ ಸಳಿಯಬಾರದು ಎಂದು ಪೊಲೀಸರು ಮಂಗಳವಾರ ಮಧ್ಯಾಹ್ನದಿಂದ ಕಟ್ಟೆಚ್ಚರ ವಹಿಸಿದ್ದಾರೆ.

ಈ ಪ್ರದೇಶದ 22 ಶಾಲೆಗಳಿಗೆ ಕಳೆದ ಮೂರು ದಿನಗಳಿಂದ ರಜೆ ಕೂಡ ಘೋಷಿಸಲಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಯಾರೂ ವಾಯು ವಿಹಾರಕ್ಕೆ ಬರಬಾರದು, ಒಂಟಿಯಾಗಿ ರಸ್ತೆಗಳಲ್ಲಿ ಓಡಾಡಬಾರದು. ಮಕ್ಕಳನ್ನು ಆಟಕ್ಕೆ ಹೊರಗೆ ಬಿಡಬಾರದು ಎಂದು ನಗರ ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ.

ಕಳೆದ ಶುಕ್ರವಾರ ಇಲ್ಲಿನ ಜಾಧವ ನಗರಕ್ಕೆ ನುಗ್ಗಿದ ಚಿರತೆ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿತ್ತು. ಇದರಿಂದ ಬೆಚ್ಚಿಬಿದ್ದ ಕಾರ್ಮಿಕನ ತಾಯಿ ಹೃದಯಾಘಾತದಿಂದ ಮೃತಪಟ್ಟರು.

ಐದು ದಿನಗಳಿಂದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ವನ್ಯಮೃಗವನ್ನು ಬೋನಿಗೆ ಬೀಳಿಸಲು ಕಸರತ್ತು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.