ADVERTISEMENT

ಕೊಯ್ನಾದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಖಡಕ್ ಪತ್ರ

ಸರ್ಕಾರದ ವಿರುದ್ಧ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಮೇ 2019, 10:17 IST
Last Updated 14 ಮೇ 2019, 10:17 IST

ಬೆಳಗಾವಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಖಡಕ್‌ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ ಇಂತಿದೆ...

‘ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನದಿಗಳು ಬತ್ತಿ ಬರಗಾಲ ತಾಂಡವವಾಡುತಿದ್ದರೂ ಸಚಿವರು, ಶಾಸಕರು ಕಣ್ಣಿದ್ದೂ ಕುರುಡರಾಗಿದ್ದಾರೆ. ಕಿವಿ ಇದ್ದೂ ಕಿವುಡರಾಗಿದ್ದಾರೆ. ಈ ಮೂರು ಜಿಲ್ಲೆಗಳ ಜನ ತಿಂಗಳಿಂದ ಎದುರಿಸುತ್ತಿರುವ ತೀವ್ರ ಬರಗಾಲ ಮತ್ತು ಕುಡಿಯುವ ನೀರಿನ ಅಭಾವದ ಪರಿಣಾಮವಾಗಿ ಹಿಂದೆದೂ ಕಾಣದಿದ್ದ ಸಂಕಷ್ಟದ ದುಃಸ್ಥಿತಿ ಉಂಟಾಗಿದೆ. ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಅಥವಾ ವಾರಣಾ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿಸುವ ತಮ್ಮ ಸರ್ಕಾರದ ಪ್ರಯತ್ನಗಳು ಫಲ ನೀಡಿಲ್ಲ. ಮಹಾರಾಷ್ಟ್ರದ ಮೇಲೆ ಒತ್ತಡ ತರಲು ಗಂಭೀರ ಪ್ರಯತ್ನಗಳನ್ನು ಮಾಡದಿರುವುದು ದೊಡ್ಡ ದುರಂತವೇ ಸರಿ’.

ADVERTISEMENT

‘ಮುಂಬೈ ಕರ್ನಾಟಕಕ್ಕೆ ಒದಗಿರುವ ಇಂದಿನ ಸಂಕಷ್ಟದ ಸ್ಥಿತಿಯು ಒಂದು ವೇಳೆ ದಕ್ಷಿಣ ಕರ್ನಾಟಕಕ್ಕೆ, ವಿಶೇಷವಾಗಿ ಹಾಸನ, ಮಂಡ್ಯ, ಮೈಸೂರು, ಕೋಲಾರ ತುಮಕೂರು ಜಿಲ್ಲೆಗಳಿಗೆ ಬಂದಿದ್ದರೆ ತಾವು ಇದೇ ರೀತಿ ದಿವ್ಯ ನಿರ್ಲಕ್ಷ್ಯ ಮಾಡುತಿದ್ದಿರಾ? ಕೃಷ್ಣಾ ನದಿಗೆ ನೀರು ಬಿಡಿಸುವ ಸಂಬಂಧ ಸರ್ವ ಪಕ್ಷದ ನಿಯೋಗವನ್ನು ಈ ವೇಳೆಗಾಗಲೇ ಮುಂಬೈಗೆ ಕಳುಹಿಸಬೇಕಾಗಿತ್ತು. ಒತ್ತಡ ತರಬೇಕಾಗಿತ್ತು. ಆದರೆ, ತಮ್ಮ ಸರ್ಕಾರ ಕೇವಲ ಪತ್ರಗಳನ್ನು ಬರೆಯವುದರಲ್ಲೇ ಕಾಲಹರಣ ಮಾಡುತ್ತಿದೆ. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ. ಈ ಸತ್ಯ ತಮಗೂ ಗೊತ್ತಿದೆ’.

‘ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜನತೆಯ ಸಂಕಷ್ಟದತ್ತ ಕಣ್ತೆರೆದು ನೋಡಿಲ್ಲ. ಸರ್ಕಾರವೂ ಗರಬಡೆದಂತೆ, ಬಂಡೆಗಲ್ಲಿನಂತೆ ಇದೆ. ಹೀಗಾದರೆ ಜನ ಸಾಯಬೇಕೇ? ಜಾನುವಾರುಗಳು ನೀರು, ಮೇವಿಲ್ಲದೇ ವಿಲವಿಲ ಒದ್ದಾಡಿ ಪ್ರಾಣ ಬಿಡಬೇಕೇ? ತಮ್ಮ ಸರ್ಕಾರದ ವರ್ತನೆಯಿಂದಾಗಿ ಜನತೆಯಲ್ಲಿ ಅನಾಥ ಪ್ರಜ್ಞೆ ಮೂಡತೊಡಗಿದೆ’.

‘ಸರ್ಕಾರಕ್ಕೆ ಮುಂಬೈ ಕರ್ನಾಟಕ ಜಿಲ್ಲೆಗಳ ಸಂಕಷ್ಟದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಲ್ಲಿ ಕೂಡಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಖುದ್ದಾಗಿ ಮಾತುಕತೆ ನಡೆಸಿ, ಕೃಷ್ಣಾ ನದಿಗೆ ನೀರು ಬಿಡಿಸಬೇಕು. ಉಸ್ತುವಾರಿ ಸಚಿವರು, ಶಾಸಕರನ್ನು ಸಂಕಷ್ಟದ ತಾಲ್ಲೂಕುಗಳಿಗೆ ಕಳುಹಿಸಿ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು. ಜನ– ಜಾನುವಾರ ಸಾವಿಗೀಡಾದ ನಂತರ ಪರಿಹಾರ ಕೊಡುವ ಬದಲಿಗೆ ಪ್ರಾಣ ರಕ್ಷಣೆಗೆ ಮುಂದಾಗಬೇಕೆಂದು ಈ ಭಾಗದ ಜನತೆಯ ಪರವಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.