ADVERTISEMENT

ಖಾದ್ಯ ತೈಲ ಖರೀದಿಗೆ ಬೆಳಗಾವಿಯಲ್ಲೂ ಮಿತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 10:04 IST
Last Updated 7 ಮಾರ್ಚ್ 2022, 10:04 IST
ಬೆಳಗಾವಿಯ ಬಾಕ್ಸೈಟ್ ರಸ್ತೆಯ ರಿಲಯನ್ಸ್ ಸ್ಮಾರ್ಟ್ ಮಳಿಗೆಯಲ್ಲಿ ಅಡುಗೆ ಎಣ್ಣೆ ಖರೀದಿ ಮಿತಿಯ ಬಗ್ಗೆ ಮಾಹಿತಿ ಹಾಕಿರುವುದು
ಬೆಳಗಾವಿಯ ಬಾಕ್ಸೈಟ್ ರಸ್ತೆಯ ರಿಲಯನ್ಸ್ ಸ್ಮಾರ್ಟ್ ಮಳಿಗೆಯಲ್ಲಿ ಅಡುಗೆ ಎಣ್ಣೆ ಖರೀದಿ ಮಿತಿಯ ಬಗ್ಗೆ ಮಾಹಿತಿ ಹಾಕಿರುವುದು   

ಬೆಳಗಾವಿ: ನಗರದ ಮಾರ್ಟ್‌ಗಳು ಹಾಗೂ ಪ್ರಮುಖ ಮಳಿಗೆಗಳಲ್ಲಿ ಖಾದ್ಯ ತೈಲ ಖರೀದಿಗೆ ಮಿತಿ ವಿಧಿಸಲಾಗಿದೆ.

ನೆಹರೂ ನಗರದ ಡಿ- ಮಾರ್ಟ್‌‌ನಲ್ಲಿ ಒಬ್ಬರಿಗೆ ಪ್ಯಾಕೆಟ್ ಆದರೆ ತಲಾ 1 ಲೀಟರ್‌ನ 2 ಪಾಕೆಟ್, ಕ್ಯಾನ್ ಆದರೆ 5 ಲೀಟರ್‌ನ ಒಂದನ್ನು ಮಾತ್ರ ಕೊಡಲಾಗುತ್ತಿದೆ. ಹೆಚ್ಚಿಗೆ ಕೇಳಿದರೆ ನಿರಾಕರಿಸಲಾಗುತ್ತಿದೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಕಾರಣ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು. ತೈಲ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು ಕಂಡುಬಂತು. ಪತಿಯೊಂದಿಗೆ ಬಂದಿದ್ದ ಪತ್ನಿಗೆ ಪ್ರತ್ಯೇಕವಾಗಿ ಖಾದ್ಯ ತೈಲ‌ ಕೊಡಲು ಸಿಬ್ಬಂದಿ ಒಪ್ಪಲಿಲ್ಲ. ‌ಸ್ಟೋರ್‌ನ ಅಧಿಕಾರಿಗಳ ಸೂಚನೆ ಪಾಲಿಸುತ್ತಿರುವುದಾಗಿ ಅವರು ತಿಳಿಸಿದರು.

ಬಾಕ್ಸೈಟ್ ರಸ್ತೆಯ ರಿಲಯನ್ಸ್ ಸ್ಮಾರ್ಟ್‌ನಲ್ಲಿ ಪ್ಯಾಕೆಟ್ ಖರೀದಿಸಿದರೆ ತಲಾ ಒಂದು ಲೀಟರ್‌ನ 4, ಕ್ಯಾನ್ ಖರೀದಿಸಿದರೆ 5 ಲೀಟರ್ ಮಾತ್ರ ನೀಡಲಾಗುತ್ತಿತ್ತು. 15 ಲೀಟರ್ ಕ್ಯಾನ್ ಖರೀದಿಸಿದರೆ ಒಂದು ಮಾತ್ರ ನೀಡಲಾಗುತ್ತಿತ್ತು. ಆ ಕ್ಯಾನ್‌ಗಳು ಖಾಲಿಯಾಗಿದ್ದವು. ಕೆಲವು ಬ್ರ್ಯಾಂಡ್‌ಗಳ ತೈಲ‌ ಲಭ್ಯವಿರಲಿಲ್ಲ. ಐದು ಲೀಟರ್ ಕ್ಯಾನ್‌ಗೆ ಸರಾಸರಿ ₹ 50 ಜಾಸ್ತಿಯಾಗಿದೆ.

ADVERTISEMENT

ಕೊಲ್ಹಾಪುರ ವೃತ್ತದ ಸಮೀಪದ ಮೋರ್ ಸ್ಟೋರ್‌ನಲ್ಲಿ ಖಾದ್ಯ ತೈಲ ಲಭ್ಯವಿರಲಿಲ್ಲ. ರಷ್ಯಾ- ಉಕ್ರೇನ್ ನಡುವಿನ ಯುದ್ಧದ ಕಾರಣದಿಂದಾಗಿ ತೈಲದ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸಿಬ್ಬಂದಿ ಪ್ರಜಾವಾಣಿಗೆ ತಿಳಿಸಿದರು.

ಚಿಲ್ಲರೆ ಅಂಗಡಿಗಳಲ್ಲಿ ಖರೀದಿ ಮಿತಿ ಇಲ್ಲ. ಸ್ಟಾಕ್ ಇರುವವರೆಗೆ ಕೊಡುತ್ತೇವೆ. ಆದರೆ, ಪೂರೈಕೆ ಕಡಿಮೆ ಇದೆ ಎಂದು ವರ್ತಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.