ADVERTISEMENT

ಕಿಂಗ್ ಆಗಲು ಅವಕಾಶವಿದ್ದರೂ ಕಿಂಗ್ ಮೇಕರ್ ಆದರು: ಮೃತ್ಯುಂಜಯ ಸ್ವಾಮೀಜಿ

ರಮೇಶ ಜಾರಕಿಹೊಳಿಗೆ ಸ್ವಾಮೀಜಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 8:34 IST
Last Updated 28 ಅಕ್ಟೋಬರ್ 2020, 8:34 IST
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಮನವಿ ಸ್ವೀಕರಿಸಿದರು.
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಮನವಿ ಸ್ವೀಕರಿಸಿದರು.    
""

ಬೆಳಗಾವಿ: ‘ನಮ್ಮ ಸಮಾಜದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ರಮೇಶ ಜಾರಕಿಹೊಳಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಕಿಂಗ್ ಆಗಲು ಅವಕಾಶವಿತ್ತು. ಆದರೆ ಅವರು ಕಿಂಗ್ ಮೇಕರ್ ಆಗಿದ್ದಾರೆ. ಇದನ್ನು ಅವರ ಪಕ್ಷದವರು ಕೂಡ ಒಪ್ಪುತ್ತಾರೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಮೀಸಲಾತಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ತಮ್ಮಿಂದ ಮನವಿ ಸ್ವೀಕರಿಸಲು ಸಚಿವರು ಬಂದಿದ್ದ ವೇಳೆ ಸ್ವಾಮೀಜಿ ಮಾತನಾಡಿದರು.

ರಮೇಶ ಜಾರಕಿಹೊಳಿ ಅವರು ಸತತವಾಗಿ ಆಯ್ಕೆಯಾಗುವುದಕ್ಕೆ ಗೋಕಾಕದಲ್ಲಿ ನಮ್ಮ ಸಮಾಜದವರ ಕೊಡುಗೆ ದೊಡ್ಡದಿದೆ ಎಂದರು.

ರಮೇಶ ಜಾರಕಿಹೊಳಿ ಮಾತನಾಡಿ, ‘ಚುನಾವಣೆ ನೀತಿಸಂಹಿತೆ ಇರುವುದರಿಂದ ಆಶ್ವಾಸನೆ ಕೊಡಲು ಬರುವುದಿಲ್ಲ. ಆದರೆ ಸಮಾಜದೊಂದಿಗೆ ನಾವು ಇದ್ದೇವೆ. ಎಲ್ಲ ಸಮಾಜದ ಬಗ್ಗೆ ಕಳಕಳಿ ಇರುವ ಸ್ವಾಮೀಜಿ. ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಮಾತನಾಡಿ, ‘ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಪ್ರವರ್ಗ 2ಎಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದೂ ಒತ್ತಾಯಿಸಬೇಕು’ ಎಂದರು.

ಪ್ರಸಂಗ ಬಂದರೆ ಬೆಳಗಾವಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಕ್ಕೂ ಸಿದ್ಧವಾಗಬೇಕು ಎಂದು ತಿಳಿಸಿದರು.

ಕ್ಷೇತ್ರದಲ್ಲಿ ನಾನು ಬಹಳಷ್ಟು ಕೆಲಸ ಮಾಡಿದರೂ, ಷಡ್ಯಂತ್ರದಿಂದಾಗಿ ನಾನು ಸೋತೆ. ಹೋರಾಟ ಮಾಡಿ ಸಾಕಾಗಿದೆ. ಯುವಜನರು ಹೋರಾಟಕ್ಕೆ ಇಳಿದರೆ ನಿಮ್ಮೊಂದಿಗೆ ನಾನು ಇರುತ್ತೇನೆ. ಹರಿಹರದ ಪಂಚಮಸಾಲಿ ಪೀಠವೂ ಕೂಡ ನಮ್ಮೊಂದಿಗೆ ಇದೆ ಎಂದರು.

ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಜನ ಸಮುಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.