ADVERTISEMENT

ಬಿಜೆಪಿ ಟಿಕೆಟ್‌ಗಾಗಿ ಲಾಬಿ ಜೋರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 10:16 IST
Last Updated 5 ಡಿಸೆಂಬರ್ 2020, 10:16 IST

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎದುರಾಗಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ಹಲವರು ಪಕ್ಷದ ನಾಯಕರ ಬಳಿ ಲಾಬಿ ನಡೆಸಿದರು.

ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ಹಾಗೂ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರನ್ನು ಭೇಟಿಯಾಗಿ ಟಿಕೆಟ್‌ಗಾಗಿ ಕಸರತ್ತು ನಡೆಸಿದರು.

ಆಕಾಂಕ್ಷಿಗಳಾದ ರಮೇಶ ಕತ್ತಿ, ಅಮರಸಿಂಹ ಪಾಟೀಲ, ರಾಜು ಚಿಕ್ಕನಗೌಡರ, ಡಾ.ರವಿ ಪಾಟೀಲ, ಕಿರಣ್ ಜಾಧವ್, ಸಂಜಯ ಪಾಟೀಲ, ರಮೇಶ ದೇಶಪಾಂಡೆ, ರಾಜು ಟೋಪಣ್ಣವರ, ರುದ್ರಣ್ಣ ಚಂದರಗಿ ಮೊದಲಾದವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೊಂದೆಡೆ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡುವಂತೆ ಕೆಲವು ನಾಯಕರು ಹಾಗೂ ಬೆಂಬಲಿಗರು ಆಗ್ರಹ ಮಂಡಿಸಿದ್ದಾರೆ. ತಮ್ಮೊಂದಿಗೆ ಆಪ್ತ ಒಡನಾಟದಲ್ಲಿರುವ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ.

ADVERTISEMENT

‘ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ. ರಾಜ್ಯಸಭಾ ಚುನಾವಣೆಗೂ ಅವಕಾಶವಾಗಿಲ್ಲ. ಹೀಗಾಗಿ, ಲೋಕಸಭಾ ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದವರ ಬದಲಿಗೆ ಬೇರೆಯವರಿಗೆ ಟಿಕೆಟ್‌ ಕೊಡುವುದಾದರೆ ನನ್ನನ್ನು ಪರಿಗಣಿಸಬೇಕು’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ರಮೇಶ ಕತ್ತಿ ವರಿಷ್ಠರ ಎದುರು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.