ADVERTISEMENT

ಬೆಳಗಾವಿ: ಕುಂದಾಕ್ಕೆ ‘ಕಹಿ’ ಕೊಟ್ಟ ಲಾಕ್‌ಡೌನ್‌

ಬೆಳಗಾವಿಯಿಂದ ರಾಜ್ಯದಾದ್ಯಂತ ಪೂರೈಕೆಯಾಗುತ್ತದೆ

ಎಂ.ಮಹೇಶ
Published 12 ಮೇ 2020, 19:30 IST
Last Updated 12 ಮೇ 2020, 19:30 IST
ಬೆಳಗಾವಿ ‘ಕುಂದಾ’ ಪ್ಯಾಕ್‌
ಬೆಳಗಾವಿ ‘ಕುಂದಾ’ ಪ್ಯಾಕ್‌   

ಬೆಳಗಾವಿ: ಮಾರಕ ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಿಸಿರುವುದರಿಂದಾಗಿ, ಬೆಳಗಾವಿಯ ವಿಶೇಷ ಸಿಹಿತಿನಿಸಾದ ‘ಕುಂದಾ’ ಉತ್ಪಾದನೆ ಹಾಗೂ ಮಾರಾಟದ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಇದರಿಂದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್‌) ಹಾಗೂ ಖಾಸಗಿಯಾಗಿ ತಯಾರಕರಿಗೆ ನಿರೀಕ್ಷಿತ ಆದಾಯದ ಮೇಲೆ ದೊಡ್ಡ ಪೆಟ್ಟು ಬಿದ್ದಿದ್ದು, ಅವರು ನಷ್ಟದ ‘ಕಹಿ’ ಅನುಭವಿಸಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಮಾಡುವ ‘ನಂದಿನಿ’ ಹೆಸರಿನ ವಿಶೇಷ ಬ್ರಾಂಡ್‌ಗಳಲ್ಲಿ ಒಂದಾಗಿರುವ ‘ಕುಂದಾ’ ಅನ್ನು ಬೆಮುಲ್‌ನಲ್ಲಿ ಮಾತ್ರವೇ ತಯಾರಿಸಲಾಗುತ್ತದೆ. ಇಲ್ಲಿಂದ ರಾಜ್ಯದಾದ್ಯಂತ, ಜೊತೆಗೆ ಗೋವಾ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಗೂ ರವಾನಿಸಲಾಗುತ್ತದೆ. ಉತ್ತಮ ಗುಣಮಟ್ಟದ ಹಾಲಿನಿಂದ ತಯಾರಿಸಲಾಗುವುದು, ಉತ್ತಮ ಸ್ವಾದದ ಕುಂದಾಕ್ಕೆ ಗ್ರಾಹಕರಿಂದ ಬಹಳ ಬೇಡಿಕೆ ಇರುತ್ತದೆ. ಆದರೆ, ಲಾಕ್‌ಡೌನ್‌ನಿಂದಾಗಿ ಬೆಮುಲ್‌ನಲ್ಲಿ ಕುಂದಾ ಉತ್ಪಾದನೆಯೇ ನಡೆಯಲಿಲ್ಲ.

ಸ್ಟಾಕ್‌ ಇರಲಿಲ್ಲ

ADVERTISEMENT

‘ನಂದಿನಿ’ ಮಿಲ್ಕ್‌ ಪಾರ್ಲರ್‌ಗಳ ಮೇಲೂ ಲಾಕ್‌ಡೌನ್‌ ಬಹಳ ಪರಿಣಾಮ ಬೀರಿದೆ. ಅಲ್ಲಿ ಬಹುತೇಕ ಹಾಲು ಬಿಟ್ಟರೆ ಬೇರೆ ಪದಾರ್ಥಗಳು ಮಾರಾಟ ಸಾಮಾನ್ಯ ದಿನಗಳಂತೆ ಇರಲಿಲ್ಲ. ಹೀಗಾಗಿ, ಸಹಜವಾಗಿಯೇ ಸಿಹಿತಿನಿಸುಗಳಿಗೆ ಬೇಡಿಕೆ ಕುಸಿದಿತ್ತು. ಪರಿಣಾಮ, ಒಕ್ಕೂಟದಲ್ಲಿ ಕುಂದಾ ತಯಾರಿಕೆ ನಡೆದಿರಲಿಲ್ಲ. ರಾಜ್ಯದ ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿ ಕುಂದಾ ಮಾರಾಟಕ್ಕೆ ಬೇಡಿಕೆ ಇದ್ದರೂ ಸ್ಟಾಕ್ ಇರಲಿಲ್ಲ. ಬೇರೆ ಕಡೆಗೆ ಸಾಗಣೆಯೂ ತೊಂದರೆಯಾಗಿತ್ತು. ಲಾಕ್‌ಡೌನ್ ಘೋಷಣೆಗೂ ಮುನ್ನವೇ ಖರೀದಿಸಿದ್ದ ಕುಂದಾ ಕೆಲವೇ ದಿನಗಳಲ್ಲಿ ಮಾರಾಟವಾಗಿತ್ತು.

ಈಗಲೂ ನಗರ ಸೇರಿದಂತೆ ಜಿಲ್ಲೆಯ ಹಲವು ಮಿಲ್ಕ್‌ ಪಾರ್ಲರ್‌ಗಳಲ್ಲಿ ಕುಂದಾ, ಕುಕ್ಕೀಸ್, ಮೈಸೂರು ಪಾಕ್‌ ಮೊದಲಾದ ತಿನಿಸುಗಳು ಲಭ್ಯವಿಲ್ಲ.

ತೊಂದರೆಯಾಗಿತ್ತು

ಒಕ್ಕೂಟದಿಂದ ತಿಂಗಳಿಗೆ ಸರಾಸರಿ 8 ಟನ್‌ನಿಂದ 9 ಟನ್‌ಗಳಷ್ಟು ಕುಂದಾ ಅನ್ನು ರಾಜ್ಯ ಸೇರಿದಂತೆ ಬೇರೆ ಕಡೆಗಳಿಗೆ ಕಳುಹಿಸಲಾಗುತ್ತಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಬೆಮುಲ್‌ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್‌, ‘ಬೇಸಿಗೆ ಸಂದರ್ಭದಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಇರುತ್ತದೆ ಹಾಗೂ ಪ್ರವಾಸೋದ್ಯಮವೂ ಗರಿಗೆದರಿರುತ್ತಿತ್ತು. ಹೀಗಾಗಿ ಈ ವೇಳೆಯಲ್ಲಿ ಕುಂದಾಕ್ಕೆ ಬೇಡಿಕೆ ಇರುತ್ತದೆ. ಆದರೆ, ಲಾಕ್‌ಡೌನ್‌ನಿಂದಾಗಿ ತೊಂದರೆ ಆಗಿತ್ತು. ಮಾರ್ಗಸೂಚಿಗಳ ಪ್ರಕಾರ ಕಡಿಮೆ ಸಂಖ್ಯೆಯ ನೌಕರರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. ಹೀಗಾಗಿ, ಕುಂದಾ ಉತ್ಪಾದನೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೆವು. ಕೆಲವು ದಿನಗಳಿಂದ ತಯಾರಿಕೆ ಆರಂಭಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಕಡೆಯೂ ಪೂರೈಕೆ ಆಗಲಿದ್ದು, ಗ್ರಾಹಕರಿಗೆ ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರಸ್ತುತ ವಹಿವಾಟು ಸುಧಾರಿಸುತ್ತಿದೆ. ಪುಣೆ ಹಾಗೂ ಗೋವಾ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇದೆ. ನಿತ್ಯ 2.05 ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿದೆ. ಇದರಲ್ಲಿ 60ಸಾವಿರ ಲೀಟರ್ ಮಾತ್ರವೇ ಮಾರಾಟವಾಗುತ್ತಿದೆ. 30ರಿಂದ 40ಸಾವಿರ ಲೀಟರ್‌ ಅನ್ನು ಹೆಚ್ಚು ದಿನಗಳವರೆಗೆ ಬಾಳಿಕೆ ಬರುವಂತಹ ಫ್ಲೆಕ್ಸಿ ಪ್ಯಾಕ್ ಮಾಡಿ ಆಂಧ್ರಪ್ರದೇಶಕ್ಕೆ ಕಳುಹಿಸುತ್ತಿದ್ದೇವೆ. ಒಂದು ಲಕ್ಷ ಲೀಟರ್‌ ಅನ್ನು ಹಾಲಿನ ಪುಡಿ ತಯಾರಿಕೆಗೆ ರವಾನಿಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.