ADVERTISEMENT

‘ಸ್ತಬ್ಧ’ವಾದ ಬೆಳಗಾವಿ: ಲಾಕ್‌ಡೌನ್‌ ಯಶಸ್ವಿ

ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ, ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 24 ಮೇ 2020, 13:23 IST
Last Updated 24 ಮೇ 2020, 13:23 IST
ಬೆಳಗಾವಿಯ ಕೊಲ್ಹಾಪುರ ವೃತ್ತದಲ್ಲಿ ಪೈಪೊಂದರ ಒಳಗಿಂದ ಲಾಕ್‌ಡೌನ್‌ ನೋಟ ಕಂಡಿದ್ದು ಹೀಗೆ...ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಕೊಲ್ಹಾಪುರ ವೃತ್ತದಲ್ಲಿ ಪೈಪೊಂದರ ಒಳಗಿಂದ ಲಾಕ್‌ಡೌನ್‌ ನೋಟ ಕಂಡಿದ್ದು ಹೀಗೆ...ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಕೊರೊನಾ ಲಾಕ್‌ಡೌನ್‌ಗೆ ಭಾನುವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ಅನವಶ್ಯವಾಗಿ ರಸ್ತೆಗಿಳಿಯದೆ ಪೊಲೀಸರಿಗೆ ಸಹಕರಿಸಿದರು.

ಹಾಲಿನ ಅಂಗಡಿಗಳು, ಮೆಡಿಕಲ್‌ ಸ್ಟೋರ್‌ಗಳು, ಆಸ್ಪತ್ರೆ ಮೊದಲಾದ ಅವಶ್ಯ ಸೇವೆಗಳಿಗಷ್ಟೆ ಅವಕಾಶ ನೀಡಲಾಗಿತ್ತು. ಸಾರಿಗೆ ಬಸ್‌ಗಳು, ಆಟೊರಿಕ್ಷಾಗಳು ರಸ್ತೆಗಿಳಿಯಲಿಲ್ಲ. ಬಸ್‌ನಿಲ್ದಾಣ, ರಸ್ತೆಗಳು, ವೃತ್ತಗಳು ಮೊದಲಾದ ಸಾರ್ವಜನಿಕ ಸ್ಥಳಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮಾರಕ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದಿಂದ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು.

ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊರಿಕ್ಷಾಗಳೊಂದಿಗೆ ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯಲಿಲ್ಲ. ವಾರಾಂತ್ಯದಲ್ಲಿ ಜನಜಂಗುಳಿ ಹಾಗೂ ವಾಹನಗಳ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ರಸ್ತೆಗಳು ಭಣಗುಡುತ್ತಿದ್ದವು. ಎಪಿಎಂಸಿಯಲ್ಲೂ ಚಟುವಟಿಕೆಗಳು ಇರಲಿಲ್ಲ. ಮದ್ಯದ ಅಂಗಡಿಗಳನ್ನು ಕೂಡ ಬಂದ್ ಮಾಡಲಾಗಿತ್ತು.

ADVERTISEMENT

ತೆಲಸಂಗ ವರದಿ: ಸರ್ಕಾರದ ಆದೇಶದಂತೆ ಗ್ರಾಮದಲ್ಲಿ ಭಾನುವಾರ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಜನರು ಬೀದಿಗಿಳಿಯದೆ ಸಹರಿಸಿದರು. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ಎರಡು ಕಡೆ ತೆಲಸಂಗ ಹೊರವಲಯದ ಜಿಲ್ಲಾ ಗಡಿಯಲ್ಲಿ ಚೆಕ್‍ಪೋಸ್ಟ್‌ ಹಾಕಿ ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ನಿರ್ಬಂಧಿಸಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸೋಮವಾರ ಬೆಳಿಗ್ಗೆ 7ರ ನಂತರ ಜನರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.