ADVERTISEMENT

ಸತೀಶ ಜಾರಕಿಹೊಳಿ ಬೆಂಬಲಿಸುವಂತೆ ಮಧು ಬಂಗಾರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:37 IST
Last Updated 11 ಏಪ್ರಿಲ್ 2021, 13:37 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಳಗಾವಿ: ‘ರೈತರು, ಬಡವರು, ಹಿಂದುಳಿದವರು ಮತ್ತು ಶೋಷಿತರನ್ನು ಕಡೆಗಣಿಸಿ ದುರಾಡಳಿತ ನಡೆಸುತ್ತಿರುವ ಬಿಜೆಪಿಯವರು ಅಧಿಕಾರ ನಡೆಸಲು ಯೋಗ್ಯರಲ್ಲ’ ಎಂದು ಮುಖಂಡ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಡವರು, ಶೋಷಿತರು, ಹಿಂದುಳಿದವರು, ಆರ್ಥಿಕವಾಗಿ ಅಶಕ್ತರಿಗೆ ನೆರವು ದೊರೆಯುವುದು ಮತ್ತು ಅಭಿವೃದ್ಧಿಯು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದರು.

‘ಸತೀಶ ಜಾರಕಿಹೊಳಿ ಅವರು ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಗೆ ಆಪ್ತರಾಗಿದ್ದರು. ನನಗೂ ಅನೇಕ ಬಾರಿ ಸಹಾಯ–‌ಸಹಕಾರ ನೀಡಿದ್ದಾರೆ. ಹೀಗಾಗಿ, ಅವರನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದೇನೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರವು ಕೃಷಿಕರನ್ನು ಕಡೆಗಣಿಸಿದೆ. ದೆಹಲಿಯ ಗಡಿಗಳಲ್ಲಿ ಮುಷ್ಕರ ನಡೆಸುತ್ತಿದ್ದರೂ ಅವರಿಗೆ ಸ್ಪಂದಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ರಾಜ್ಯದಲ್ಲಿ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಹಟಮಾರಿ ಧೋರಣೆ ತಳೆದಿದೆ. ಅವರೊಂದಿಗೆ ಮಾತುಕತೆಗೆ ಮುಂದಾಗುತ್ತಿಲ್ಲ. ಪರಿಣಾಮ, ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ’ ಎಂದು ದೂರಿದರು.

‘ತಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದ ಆಶ್ರಯ ಯೋಜನೆ ಸೇರಿ ಹಲವು ಜನಪರ ಕಾರ್ಯಕ್ರಮಗಳು ಇಂದಿಗೂ ಮುಂದುವರಿದಿವೆ. ಯಾವ ಸರ್ಕಾರಗಳೂ ಆ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿರಲಿಲ್ಲ. ಆದರೆ, ಈಗಿನ ಸರ್ಕಾರ ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಣ ಬಿಡುಗಡೆಗೂ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯೋಗ್ಯ ಮತ್ತು ರಾಜಕೀಯ ಚಿಂತನೆ ಹೊಂದಿರುವ ವ್ಯಕ್ತಿ ಗೆಲ್ಲಬೇಕು. ಅದಕ್ಕಾಗಿ ಸತೀಶ ಜಾರಕಿಹೊಳಿ ಗೆಲ್ಲಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.