ADVERTISEMENT

ಮಹದಾಯಿ: 2ನೇ ಬಾರಿಗೆ ಸಮಿತಿ ಭೇಟಿ 26ರಂದು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 8:46 IST
Last Updated 23 ಮಾರ್ಚ್ 2021, 8:46 IST

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ನೀಡಿದ್ದ ಆದೇಶದ ಅನ್ವಯ ರಚನೆಯಾಗಿರುವ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನೀರಾವರಿ ಇಲಾಖೆಗಳ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳ ತ್ರಿಸದಸ್ಯ ಜಂಟಿ ಪರಿಶೀಲನಾ ಸಮಿತಿಯು ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿರುವ ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ 2ನೇ ಬಾರಿಗೆ ಮಾರ್ಚ್‌ 26ರಂದು ಭೇಟಿ ನೀಡಲಿದೆ.

‘ಕರ್ನಾಟಕವು ಈಗಾಗಲೇ ಮಹದಾಯಿ ನೀರನ್ನು ತಿರುಗಿಸಿಕೊಂಡಿದೆ’ ಎಂಬ ಗೋವಾದ ಆರೋಪದ ಹಿನ್ನೆಲೆಯಲ್ಲಿ ಜಂಟಿ ಪರಿಶೀಲನೆಗೆ ನ್ಯಾಯಾಲಯ ಸೂಚಿಸಿತ್ತು. ಮಾರ್ಚ್‌ 19ರಂದು ಸಮಿತಿಯು ಮೊದಲ ಬಾರಿಗೆ ಭೇಟಿ ನೀಡಿತ್ತು. ಆದರೆ, ಒಮ್ಮತದ ನಿರ್ಧಾರಕ್ಕೆ ಬರಲಾಗಲಿಲ್ಲ ಎನ್ನಲಾಗುತ್ತಿದೆ. ಅಲ್ಲದೇ ಗೋವಾದ ಅಧಿಕಾರಿಗಳು ಕರ್ನಾಟಕ ಪೊಲೀಸರು ಮತ್ತು ನೀರಾವರಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ವಾಪಸ್ ಹೋಗಿದ್ದರು. ಇದೀಗ, 2ನೇ ಭೇಟಿಗೆ ನಿರ್ಧರಿಸಲಾಗಿದೆ.

ಈ ನಡುವೆ, ಗೋವಾದ ವಿಳಂಬ ತಂತ್ರದ ಬಗ್ಗೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ಷೇಪ ವ್ಯಕ್ತಪಡಿಸಿ, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾರ್ಚ್‌ 21ರಂದು ಪತ್ರ ಬರೆದಿದ್ದರು. ಸೋಮವಾರ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲೂ ಈ ವಿಷಯವಾಗಿ ಚರ್ಚಿಸಲಾಗಿದೆ. ಕ್ರಿಯಾ ಸಮಿತಿಯು, ಮಹದಾಯಿ ವಿಷಯದಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸುತ್ತಿರುವ ಸುಪ್ರೀಂ ಕೋರ್ಟ್‌ ವಕೀಲ ಮೋಹನ ಕಾತರಕಿ ಅವರ ಗಮನಕ್ಕೂ ತಂದಿದೆ.

ADVERTISEMENT

ಮರು ಭೇಟಿಯ ಕಾಲಕ್ಕೆ ಸಮಿತಿಯು ಒಮ್ಮತದ ನಿರ್ಧಾರಕ್ಕೆ ಬಂದಲ್ಲಿ, ಏಪ್ರಿಲ್‌ ಮೊದಲ ವಾರ ಸುಪ್ರೀಂ ಕೋರ್ಟ್‌ ಎದುರು ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.