ADVERTISEMENT

‘ಮಹದಾಯಿ ಅನುಷ್ಠಾನಕ್ಕೆ ₹ 1,000 ಕೋಟಿ ಬೇಕು’

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:04 IST
Last Updated 29 ಫೆಬ್ರುವರಿ 2020, 14:04 IST
ಖಾನಾಪುರ ತಾಲ್ಲೂಕಿನ ಕಣಕುಂಬಿ ಪ್ರವಾಸಿ ಮಂದಿರಕ್ಕೆ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿದರು. ಸವದತ್ತಿ ಶಾಸಕ ಆನಂದ ಮಾಮನಿ, ತಹಶೀಲ್ದಾರ್‌ ರೇಷ್ಮಾ ತಾಳಿಕೋಟೆ ಉಪಸ್ಥಿತರಿದ್ದರು
ಖಾನಾಪುರ ತಾಲ್ಲೂಕಿನ ಕಣಕುಂಬಿ ಪ್ರವಾಸಿ ಮಂದಿರಕ್ಕೆ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿದರು. ಸವದತ್ತಿ ಶಾಸಕ ಆನಂದ ಮಾಮನಿ, ತಹಶೀಲ್ದಾರ್‌ ರೇಷ್ಮಾ ತಾಳಿಕೋಟೆ ಉಪಸ್ಥಿತರಿದ್ದರು   

ಬೆಳಗಾವಿ: ‘ಮಹದಾಯಿ ಜಲ ನ್ಯಾಯ ಮಂಡಳಿಯು ತನ್ನ ಮಧ್ಯಂತರ ತೀರ್ಪಿನಲ್ಲಿ ರಾಜ್ಯಕ್ಕೆ 13.42 ಟಿ.ಎಂ.ಸಿ ನೀರು ನೀಡಿದ್ದು, ಅಂತಿಮ ತೀರ್ಪಿನಲ್ಲಿ ಇನ್ನೂ ಹೆಚ್ಚಿನ ನೀರು ನೀಡುವ ಸಾಧ್ಯತೆ ಇದೆ. ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ₹ 1,000 ಕೋಟಿ ಅನುದಾನದ ಅವಶ್ಯಕತೆ ಇದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯೋಜನೆಯ ವಿರುದ್ಧ ಗೋವಾ ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆಯು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ನಾವು ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧರಾಗಿದ್ದೇವೆ’ ಎಂದರು.

‘ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರವು ನೀರು ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸಿದೆ. ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಕೆಲವು ಸೂಚನೆ ನೀಡಿದೆ. ಅವುಗಳನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ. ಜುಲೈ ತಿಂಗಳಿನಲ್ಲಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದ್ದು, ನಮಗೆ ಇನ್ನೂ ಹೆಚ್ಚಿನ ನೀರು ಸಿಗುವ ಅವಕಾಶವಿದೆ. ನದಿಯಲ್ಲಿ 188 ಟಿ.ಎಂ.ಸಿ ನೀರು ಲಭ್ಯವಿದೆ’ ಎಂದು ಹೇಳಿದರು.

ADVERTISEMENT

‘ಅಧಿಸೂಚನೆ ಹೊರಡಿಸುವುದಕ್ಕೆ ಮೊದಲು ಬಜೆಟ್‌ನಲ್ಲಿ ₹ 200 ಕೋಟಿ ನೀಡಲು ಕೇಳಿದ್ದೇವು. ಈಗ ಅಧಿಸೂಚನೆ ಹೊರಡಿಸಿರುವುದರಿಂದ ಹಾಗೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಹಕಾರಿಯಾಗಿದ್ದರಿಂದ ₹ 1,000 ಕೋಟಿಯ ಅವಶ್ಯಕತೆ ಇದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೆಚ್ಚಿನ ಹಣ ನೀಡುವ ಭರವಸೆ ಇದೆ’ ಎಂದು ತಿಳಿಸಿದರು.

‘ಯೋಜನೆ ಅನುಷ್ಠಾನದಿಂದ ಮಲಪ್ರಭಾ ನದಿಗೆ ಎಷ್ಟು ನೀರು ಹರಿದುಬರುತ್ತದೆ ಎನ್ನುವುದನ್ನು ನೋಡಬೇಕಾಗುತ್ತದೆ. ಇದರ ಆಧಾರದ ಮೇಲೆ ಹುಬ್ಬಳ್ಳಿ– ಧಾರವಾಡಕ್ಕೆ ನೀರು ಕೊಟ್ಟರೆ ಸಂತೋಷ. ಆದರೆ, ಬೆಳಗಾವಿ ಜಿಲ್ಲೆಯ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದರು.

ಯೋಜನಾ ಸ್ಥಳಕ್ಕೆ ಭೇಟಿ:ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ರಮೇಶ ಜಾರಕಿಹೊಳಿ ಅವರು ಮಹದಾಯಿ ಯೋಜನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿದರು.

ಮಲಪ್ರಭಾ ಉಗಮ ಸ್ಥಳವಾಗಿರುವ ಕಣಕುಂಬಿ, ಕಳಸಾ ನಾಲಾ ಪ್ರದೇಶಕ್ಕೂ ಭೇಟಿ ನೀಡಿದರು. ಆದರೆ, ಮಾಧ್ಯಮದವರಿಗೆ ಯೋಜನಾ ಸ್ಥಳಕ್ಕೆ ಹೋಗದಂತೆ ತಡೆದರು.

ಸವದತ್ತಿ ಶಾಸಕ ಆನಂದ ಮಾಮನಿ, ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.