
ಚಿಕ್ಕೋಡಿ ಪಟ್ಟಣದ ಹಾಲಟ್ಟಿ ಬಡಾವಣೆಯ ಕವಟಗಿಮಠ ಸಭಾಭವನದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ 60ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ನಿಡಸೋಸಿಯ ಸಿದ್ಧಸಂಸ್ಥಾನಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಚಿಕ್ಕೋಡಿ: ‘ರಾಜಕಾರಣ ನನ್ನ ವೈಯಕ್ತಿಕ ಬದುಕಿಗಾಗಿ ಅಲ್ಲ, ಜನಸೇವೆಗಾಗಿ ಮಾಡುತ್ತಿರುವೆ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಜನ ಮನೆ ಬಾಗಿಲಿಗೆ ಬರುತ್ತಾರೆ ಅಂದರೆ ಜನ ನಮ್ಮ ಕುಟುಂಬದ ಮೇಲೆ ಇರಿಸಿದ ವಿಶ್ವಾಸವೇ ಕಾರಣವಾಗಿದೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಹಾಲಟ್ಟಿ ಬಡಾವಣೆಯ ಕವಟಗಿಮಠ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಂತೇಶ ಕವಟಗಿಮಠ ಅವರ 60ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜನರ ಋಣ ತೀರಿಸುವ ಗುರುತರ ಜವಾಬ್ದಾರಿಯು ಪ್ರತಿಯೊಬ್ಬ ರಾಜಕಾರಣಿಯ ಮೇಲಿದೆ. ಕೆಲಸ ಮಾಡುವ ಮನಸ್ಸು ಇದ್ದರೆ ದೊಡ್ಡ ಸ್ಥಾನವೇ ಬೇಕೆಂದೇನಿಲ್ಲ. ಜನರ ಕಷ್ಟದಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸಿದರೆ ಅದುವೇ ದೊಡ್ಡ ಹೆಸರು ತಂದುಕೊಡುತ್ತದೆ. ಮತ್ತೊಮ್ಮೆ ನನ್ನನ್ನು ಜನರು ಅಧಿಕಾರದ ಗದ್ದುಗೆ ಏರಿಸಿದಲ್ಲಿ ಅವರ ಏಳಿಗೆಗಾಗಿ ಇನ್ನಷ್ಟು ಕೆಲಸ ಮಾಡುವೆ’ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಪ್ಪಾಣಿಯ ಮುಖಂಡ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಮಹಾಂತೇಶ ಕವಟಗಿಮಠ ಬದಲಾದ ರಾಜಕೀಯ ವಾತಾವರಣದಲ್ಲಿ ಹೊಸ ಹೊಸ ಪಟ್ಟುಗಳನ್ನು ತಿಳಿದುಕೊಳ್ಳಬೇಕು. ಈಗಿನ ದಿನಗಳಲ್ಲಿ ಮೊದಲಿನ ಪ್ರಾಮಾಣಿಕ ರಾಜಕಾರಣಕ್ಕೆ ಜಾಗವಿಲ್ಲ" ಎಂದರು.
ಸಾನ್ನಿಧ್ಯ ವಹಿಸಿದ್ದ ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಕವಟಗಿಮಠ ಕುಟುಂಬ ಕಳೆದ ಹಲವು ದಶಕಗಳಿಂದ ಸಮಾಜಸೇವೆಗಾಗಿ ಮುಡುಪಾಗಿದ್ದು, ಈಗಲೂ ಅದು ಮುಂದುವರೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಾಂತೇಶ ಕವಟಗಿಮಠ ಅವರಿಗೆ ಇನ್ನೂ ರಾಜಕೀಯದಲ್ಲಿ ಭವಿಷ್ಯವಿದೆ. ಜನರೊಂದಿಗೆ ಒಡಗೂಡಿ ನಡೆಯಬೇಕು’ ಎಂದರು.
ಸಿಎನ್‍ಸಿ ಆಪರೇಟರ್ ಕೋರ್ಸ್, ಮೋಟಾರ್ ಚಾಲನಾ ತರಬೇತಿ, ಮೋಟಾರ್ ವೈಂಡಿಂಗ್ ಕೋರ್ಸ್ ಹಾಗೂ ವಿವಿಧ ಆಟಗಳನ್ನು ಅಭ್ಯಸಿಸಲು ಅನುಕೂಲವಾಗುವ ಆಟದ ಮಳಿಗೆಗಳನ್ನು ಗಣ್ಯರು ಹಾಗೂ ಪೂಜ್ಯರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಚಿಂಚಣಿಯ ಸಿದ್ಧಸಂಸ್ಥಾನ ಮಠದ ಶಿವಪ್ರಸಾದ ದೇವರು, ಸಿ ಬಿ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಅಜೀತ ದೇಸಾಯಿ, ಭರತೇಶ ಬನವಣೆ, ಮುಖಂಡ ಜಗದೀಶ ಕವಟಗಿಮಠ, ಸಿಎಲ್‍ಇ ಸಂಸ್ಥೆಯ ಸಹಕಾರ್ಯದರ್ಶಿ ಎನ್ ಎಸ್ ವಂಟಮುತ್ತೆ, ಸುಭಾಷ ಕೌಲಾಪೂರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.