ADVERTISEMENT

ಕನ್ನಡ ನೆಲದಲ್ಲಿ ಉದಯಿಸಿದ ಮಹಾರಾಷ್ಟ್ರ: ಮಂಗಲಾ ಮೆಟಗುಡ್ಡ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 15:52 IST
Last Updated 30 ಜನವರಿ 2021, 15:52 IST
ಕಾಗವಾಡದಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಕಾಗವಾಡದಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ): ‘ಮಹಾರಾಷ್ಟ್ರವು ಹಿಂದೆ ಕರ್ನಾಟಕವಾಗಿತ್ತು. ಕನ್ನಡ ನೆಲದಲ್ಲಿ ಮಹಾರಾಷ್ಟ್ರ ಹಾಗೂ ಮರಾಠಿ ಭಾಷೆಗಳೆರಡೂ ಉದಯವಾಯಿತು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.

ಇಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕನ್ನಡ ತಾಯಿ ಎಲ್ಲ ಭಾಷಿಕರನ್ನೂ ಅಪ್ಪಿಕೊಂಡಿದ್ದಾಳೆ. ಹೀಗಾಗಿ, ಇಲ್ಲಿರುವ ಎಲ್ಲರಿಗೂ ನಾವು ಕನ್ನಡಿಗರು ಎನ್ನುವ ಹೆಮ್ಮೆ ಇರಬೇಕು’ ಎಂದು ತಿಳಿಸಿದರು.

‘ಗಡಿ ನಾಡಿಯಲ್ಲಿ ಕನ್ನಡ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಾಗವಾಡವು ರಾಜ್ಯಮಟ್ಟದ ಸಮ್ಮೇಳನ ನಡೆಸುವುದಕ್ಕೂ ಯೋಗ್ಯವಾಗಿದೆ. ಕನ್ನಡದವರೊಂದಿಗೆ ಮರಾಠಿ ಭಾಷಿಗರೂ ಪಾಲ್ಗೊಂಡಿರುವುದು ವಿಶೇಷ. ಈ ರೀತಿಯ ಬಾಂಧವ್ಯ ಮುಂದುವರಿಯಬೇಕು’ ಎಂದು ಆಶಿಸಿದರು.

ADVERTISEMENT

ಮುರಗೋಡದ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ‘ಕನ್ನಡ ಮಾತನಾಡುವ ಬದಲು ಎಲ್ಲರೂ ಝಾಲಾಚ್ ಪಾಯೀಜೆ ಎನ್ನುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಮಾತನಾಡಲು ಹಿಂಜರಿಯುತ್ತಿದ್ದೇವೆ. ಇದು ಸರಿಯಲ್ಲ’ ಎಂದರು.

‘ಬೆಳಗಾವಿಯ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಕೇವಲ ಮಾತನಾಡುವ ಬದಲು ಕಾರ್ಯರೂಪಕ್ಕೆ ತರಬೇಕಾಗಿದೆ. ಮಹಾಜನ್ ಆಯೋಗದ ವರದಿ ಇದ್ದರೂ ಸಮಸ್ಯೆ ಹೆಚ್ಚಾಗುತ್ತಿದೆ. ರಾಜಕೀಯ ನೇತಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು.‌ ಮಹಾಜನ್ ವರದಿ ಇನ್ನೂ ಜಾರಿ ಆಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.