ಬೆಳಗಾವಿ: ‘‘ನಗರದಲ್ಲಿ ಮಹಿಳೆಯರಿಗಾಗಿ ಸ್ಥಾಪಿಸಲಾಗುವ ಮಹಿಳಾ ಬಜಾರ್‌ನಲ್ಲಿ 50 ಮಳಿಗೆಗಳು ಶೀಘ್ರವೇ ಕಾರ್ಯಾರಂಭಗೊಳ್ಳಲಿವೆ. ಈ ಪೈಕಿ ಒಂದನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಗೆ ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆ ನೆರವೇರಲಿದೆ’ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದರು.
ಇಲ್ಲಿನ ಚವಾಟ ಗಲ್ಲಿಯ ಹನುಮಾನ್ ಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಖಾಸಬಾಗ್ ಬಿ.ಸಿ. ಟ್ರಸ್ಟ್ ಹಾಗೂ ಸೆಲ್ಕೊ ಸೋಲಾರ್ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಅಂಗವಿಕಲರಿಗೆ ಸಲಕರಣೆ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ನೆರವಾಗುವ ಉದ್ದೇಶದಿಂದ, ಪ್ರತಿ ಮಳಿಗೆಗೆ ₹ 2,200 ಮಾತ್ರವೇ ಕಟ್ಟಿಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
ಜಾಗೃತಿ ಮೂಡಿಸಲು:
‘ಸಮಾಜ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿ ಸರ್ಕಾರವು ಪ್ರಶಸ್ತಿಯ ಗೌರವ ಹೆಚ್ಚಿಸಲಿ’ ಎಂದು ಹೇಳಿದರು.
‘ಮಹಿಳೆಯರಿಗೆ ಸಾಮಾಜಿಕ ಹಾಗೂ ಆರ್ಥಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆ ಮಾಡುತ್ತಿದೆ. ಇದರ ಶ್ರೇಯಸ್ಸು ಧರ್ಮಾಧಿಕಾರಿಗೆ ಸಲ್ಲುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ‘ದುಶ್ಚಗಳಿಗೆ ದಾಸನಾಗಿರುವ ವ್ಯಕ್ತಿಗಿಂತ ಸೋಮಾರಿಯನ್ನು ಸಮಾಜ ಸಹಿಸುವುದಿಲ್ಲ’ ಎಂದರು.
ಕ್ರಾಂತಿ ಮಾಡಿದೆ:
‘ಸ್ವಸಹಾಯ ಸಂಘಳಿಂದಾಗಿ ಲಕ್ಷಾಂತರ ಮಹಿಳೆಯರು ಆರ್ಥಿಕವಾಗಿ ಸೃಢವಾಗಿ ಬೆಳೆದು ಸಮಾಜ ಸೇವೆಯಲ್ಲಿ ಭಾಗಿಯಾಗಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಏಳಿಗೆಗಾಗಿ ಕ್ರಾಂತಿ ಮಾಡಿದೆ’ ಎಂದು ಹೇಳಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ, ‘ಯೋಜನೆಯಲ್ಲಿ 5 ಲಕ್ಷ ಸ್ವಸಹಾಯ ಸಂಘಗಳನ್ನು ಆರಂಭಿಸಲಾಗಿದೆ. 50 ಲಕ್ಷ ಮಂದಿ ಬದುಕು ರೂಪಿಸಿಕೊಳ್ಳಲು ಮಾರ್ಗ ತೋರಿದೆ’ ಎಂದು ತಿಳಿಸಿದರು.
‘ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಅಂಗವಿಕಲರು, ಮಾರಣಾಂತಿಕ ಕಾಯಿಲೆಗೆ ತುತ್ತಾದವರು, ಸೋಮಾರಿಗಳು ಮಾತ್ರ ಬಡವರು. ಇನ್ನುಳಿದವರೆಲ್ಲರೂ ಶ್ರೀಮಂತರು. ಎಲ್ಲಿ ಸೋಮಾರಿತನ ಇರುತ್ತದೆಯೋ ಅಲ್ಲಿ ಬಡತನ ತಾಂಡವವಾಡುತ್ತದೆ. ಉದ್ಯೋಗವೇ ಮಾನವನ ಲಕ್ಷಣ’ ಎಂದರು.
ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ, ಆಯೋಜಕರಾದ ಪುಷ್ಪಾ ಕಿಶೋರ್, ಡಾ.ಎಚ್.ಟಿ. ಮಂಜುನಾಥ, ವಿ. ಸತೀಶಕುಮಾರ್, ವೈದ್ಯೆ ಡಾ.ಸೋನಾಲಿ ಸರ್ನೋಬತ್, ಯೋಜನೆಯ ಜಿಲ್ಲಾ ನಿರ್ದೇಶಕ ಎಂ. ಸೀನಪ್ಪ, ಎನ್.ಆರ್ ಮಂಜುನಾಥ, ರಾಧಿಕಾ ಪೂಜಾರಿ, ವನಿತಾ ನಾಯ್ಕ, ಕಾಂಚನಾ ಕೋಪರ್ಡೆ, ಅನಸೂಯಾ ರಜಪೂತ ಇದ್ದರು.ಎಂ.ಕೆ. ಸೋಮನಾಥ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.