ADVERTISEMENT

'ಮಹಿಳಾ ರತ್ನ ಗೌರವ ಪುರಸ್ಕಾರ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 16:19 IST
Last Updated 11 ನವೆಂಬರ್ 2021, 16:19 IST
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಿಂದ ಶರಣೆ ಗೌರಮ್ಮ ಸಂಕಿನಮಠ ಮತ್ತು ಪ್ರಗತಿಪರ ಕೃಷಿಕ ಮಹಿಳೆ ಕವಿತಾ ಮಿಶ್ರಾ ಅವರಿಗೆ ‘ಮಹಿಳಾ ರತ್ನ ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಧ್ಯಾಪಕಿ ಡಾ.ಉಜ್ವಲಾ ಎಸ್. ಹಿರೇಮಠ, ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮತ್ತು ಡಾ.ಅಲ್ಲಮಪ್ರಭು ಸ್ವಾಮೀಜಿ ಇದ್ದಾರೆ
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಿಂದ ಶರಣೆ ಗೌರಮ್ಮ ಸಂಕಿನಮಠ ಮತ್ತು ಪ್ರಗತಿಪರ ಕೃಷಿಕ ಮಹಿಳೆ ಕವಿತಾ ಮಿಶ್ರಾ ಅವರಿಗೆ ‘ಮಹಿಳಾ ರತ್ನ ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಧ್ಯಾಪಕಿ ಡಾ.ಉಜ್ವಲಾ ಎಸ್. ಹಿರೇಮಠ, ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮತ್ತು ಡಾ.ಅಲ್ಲಮಪ್ರಭು ಸ್ವಾಮೀಜಿ ಇದ್ದಾರೆ   

ಬೆಳಗಾವಿ: ‘ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಬೇಕು’ ಎಂದು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಾಗನೂರು ರುದ್ರಾಕ್ಷಿಮಠದಿಂದ ವಾಗ್ಮಿ ಮತ್ತು ಸಾಧಕಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ಇಲ್ಲಿನ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮಹಿಳಾ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಷ್ಟಗಳು ಎಲ್ಲರಿಗೂ ಬರುತ್ತವೆ. ಅವುಗಳನ್ನು ಬಂಡೆಗಲ್ಲಿನಂತೆ ನಿಂತು ಎದುರಿಸಬೇಕು. ಆ ಶಕ್ತಿ–ಛಲವನ್ನು ಬೆಳೆಸಿಕೊಳ್ಳಬೇಕು. ಹತಾಶೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಬಾರದು’ ಎಂದು ಸಲಹೆ ನೀಡಿದರು.

ADVERTISEMENT

‘ನೂರಾರು ಎಕರೆಯಲ್ಲಿ ಒಂದೇ ಬೆಳೆ ಬೆಳೆಯುವುದು ಸರಿಯಲ್ಲ. ಮಿಶ್ರ ಬೇಸಾಯ ಪದ್ಧತಿಗೆ ರೈತರು ಆದ್ಯತೆ ಕೊಡಬೇಕು. ಋತು ಆಧಾರಿತ ಬೆಳೆಗಳು ಕೈಹಿಡಿಯುತ್ತವೆ. ಈ ವಿಷಯದಲ್ಲಿ ಪ್ರಗತಿಪರ ಕೃಷಿಕ ಮಹಿಳೆ ಕವಿತಾ ಮಿಶ್ರ ಮಾದರಿಯಾಗಿದ್ದಾರೆ’ ಎಂದರು.

‘ಬುದ್ಧಿವಂತರಾದವರು ಎಂಜಿನಿಯರ್ ಅಥವಾ ವೈದ್ಯರಾಗಬೇಕು ಎಂಬ ನಂಬಿಕೆ ಸಮಾಜದಲ್ಲಿದೆ. ಕೃಷಿಯು ದಡ್ಡರ ಕೆಲಸ ಎಂದು ಪರಿಗಣಿಸಿದ್ದರಿಂದ ನಷ್ಟ ಅನುಭವಿಸುತ್ತಿದ್ದೇವೆ. ಬೇಸಾಯವೆಂದರೆ ಬುದ್ಧಿವಂತರ ಕೆಲಸ ಎಂದು ಪರಿಗಣಿಸಬೇಕು. ಪದವೀಧರರು ಬಂದು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಲಾಭ ಕಾಣಬಹುದು. ಪಂಡಿತರ ಕೆಲಸವಿದು ಎಂದು ತೋರಿಸಬೇಕು’ ಎಂದು ಹೇಳಿದರು.

‘ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೇಕೆ ಎಂಬ ಮನೋಭಾವ ಹಳ್ಳಿಗಳಲ್ಲಿ ಇಂದಿಗೂ ಇದೆ. ಇದು ಸರಿಯಲ್ಲ. ಮಹಿಳೆಯರು ಜಾಗೃತರಾಗಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಮಠದಲ್ಲಿ ದತ್ತಿ ಸ್ಥಾಪಿಸಿರುವ ಧಾರವಾಡದ ಡಾ.ಉಜ್ವಲಾ ಎಸ್. ಹಿರೇಮಠ ಮಾತನಾಡಿ, ‘ಮಹಿಳೆಯರಲ್ಲಿ ಶಕ್ತಿ ಇರುತ್ತದೆ. ಆದರೆ, ಅದರ ಅರಿವು ಇರುವುದಿಲ್ಲ. ಗೃಹಿಣಿ ಎಂದು ಪೂಜಿಸುವ ಮೂಲಕ ಆಕೆಯ ಬಲದ ಬಗ್ಗೆ ಗಮನ ಕೊಡದಂತೆ ಮಾಡಲಾಗಿದೆ. ವಿದ್ಯಾವಂತರು ಕೂಡ ಮಹಿಳೆಯರ ಭಾವನೆಗಳಿಗೆ ಬೆಲೆ ಕೊಡದಿರುವುದನ್ನು ಕಂಡಿದ್ದೇನೆ’ ಎಂದು ವಿಷಾದ ವ್ಯಕ್ತ‍ಪಡಿಸಿದರು.

‘ಮಹಿಳಾ ಸಂಗಮ ಕಾರ್ಯಕ್ರಮದ ಮೂಲಕ ರುದ್ರಾಕ್ಷಿ ಮಠದ ಶ್ರೀಗಳು ಸಬಲೀಕರಣಕ್ಕೆ ಪ್ರೇರಣೆ ನೀಡುತ್ತಿದ್ದಾರೆ. ಮಹಿಳೆಯು ಕುಟುಂಬಕ್ಕೆ ಆಧಾರವಾಗಿ ನಿಲ್ಲದಿದ್ದರೆ ಸಮಾಜಕ್ಕೆ ಅರ್ಥ ಇರುವುದಿಲ್ಲ ಎನ್ನುವುದನ್ನು ಮರೆಯಬಾರದು’ ಎಂದರು.

ನೇತೃತ್ವ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ‘ಮಕ್ಕಳಿಗೆ ಸಂಸ್ಕಾರ ಕಲಿಸಲು ಪೋಷಕರು ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

ಶರಣೆ ಗೌರಮ್ಮ ಸಂಕಿನಮಠ ಮತ್ತು ಪ್ರಗತಿಪರ ಕೃಷಿಕ ಮಹಿಳೆ ಕವಿತಾ ಮಿಶ್ರಾ ಅವರಿಗೆ ‘ಮಹಿಳಾ ರತ್ನ ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಸೀಮಾ ಚಟ್ನೀಸ್ ವಚನ ಗಾಯನ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.