ADVERTISEMENT

ಗಡಿಯಲ್ಲಿ ಕನ್ನಡ ಇನ್ನಷ್ಟು ಗಟ್ಟಿಗೊಳ್ಳಲಿ: ಸಾಮಾಜಿಕ ಕಾರ್ಯಕರ್ತ ಬಿ.ಎಲ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 13:50 IST
Last Updated 13 ನವೆಂಬರ್ 2021, 13:50 IST
ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಕನ್ನಡಪರ ಹೋರಾಟಗಾರರನ್ನು ಅಭಿನಂದಿಸಲಾಯಿತು
ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಕನ್ನಡಪರ ಹೋರಾಟಗಾರರನ್ನು ಅಭಿನಂದಿಸಲಾಯಿತು   

ಬೆಳಗಾವಿ: ‘ಎಲ್ಲರನ್ನೂ ಒಳಗೊಳ್ಳುವ ಕರ್ನಾಟಕದ ಗಡಿಯಲ್ಲಿ ಕನ್ನಡ ಇನ್ನಷ್ಟು ಗಟ್ಟಿಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಎಲ್. ಪಾಟೀಲ ಹೇಳಿದರು.

ಇಲ್ಲಿನ ಹುಕ್ಕೇರಿ ಹಿರೇಮಠದಲ್ಲಿ ಶನಿವಾರ ನಡೆದ 48ನೇ ಮಾಸಿಕ ಸುವಿಚಾರ ಚಿಂತನ ಹಾಗೂ ಕನ್ನಡಪರ ಹೋರಾಟಗಾರರಿಗೆ ಗೌರವಾಭಿನಂದನೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

‘ಕನ್ನಡ ಪರಂಪರೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯ ನಂತರ ನಮ್ಮ ದೇಶದ ಎಲ್ಲ ಭಾಷೆಗಳನ್ನು ರಕ್ಷಿಸುವುದಕ್ಕಾಗಿ ಭಾಷಾವಾರು ರಾಜ್ಯಗಳು ಉದಯಿಸಿದವು. ಕರ್ನಾಟಕದಲ್ಲಿ ಬಹು ಭಾಷೆ, ಬಹು ಸಂಸ್ಕೃತಿಗಳ ಜನರಿದ್ದರೂ ಅವರೆಲ್ಲರ ಮೊದಲ ಆದ್ಯತೆ ಕನ್ನಡವಾಗಬೇಕು’ ಎಂದರು.

ADVERTISEMENT

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ‘ಕರ್ನಾಟಕದ ಏಕೀಕರಣದಿಂದ ಮೊದಲುಗೊಂಡು ಕಿತ್ತೂರು ಕರ್ನಾಟಕ ನಾಮಕರಣದ ಕನಸು ನನಸಾದ ಕ್ಷಣದವರೆಗೆ ಮೂರು ತಲೆಮಾರುಗಳು ಹೋರಾಟದ ರಥವನ್ನು ಎಳೆದಿವೆ. 4ನೇ ತಲೆಮಾರಿನವರು ಎಳೆಯಲು ಸಿದ್ಧರಾಗಿದ್ದಾರೆ. ಅವರಿಗೆ ಬೆನ್ನೆಲುಬಾಗಿ ನಾವೆಲ್ಲ ನಿಲ್ಲಬೇಕು’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ‘ಕಿತ್ತೂರು ಸಂಸ್ಥಾನ ಮೊದಲಿನಿಂದಲೂ ಕನ್ನಡ ಮಣ್ಣಿಗಾಗಿ ಹೋರಾಟ ಮಾಡಿದೆ. ಕನ್ನಡದ ಕಟ್ಟಾಳುಗಳಿಗೆ ಬೆಂಗಾವಲಾಗಿರುತ್ತೇವೆ’ ಎಂದರು.

ನೇತೃತ್ವ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ಕನ್ನಡವು ಕೇವಲ ಕಂಠದ ಭಾಷೆಯಾಗದೆ ಕರುಳಿನ ಮತ್ತು ಅನ್ನದ ಭಾಷೆಯಾಗಬೇಕು. ಕನ್ನಡ ಹೋರಾಟದ ತೇರೆಳೆಯಲು ಸನ್ನದ್ಧರಾಗಿರುವ ಯುವ ಶಕ್ತಿಯನ್ನು ಗುರುತಿಸುವ ಕೆಲಸವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಚಿತ್ರ ನಟ ವಜ್ರಗಿರಿ ಅವರನ್ನು ಸತ್ಕರಿಸಲಾಯಿತು.

ರಮೇಶ ಸೊಂಟಕ್ಕಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಮೈನುದ್ದೀನ ಮಕಾನದಾರ, ಶಿವಪ್ಪ ಶಮರಂತ, ಮಹಾಂತೇಶ ರಣಗಟ್ಟಿಮಠ, ಶಂಕರ ಬಾಗೇವಾಡಿ, ರಾಜು ಕೋಲಾ, ಅನಂತ ಬ್ಯಾಕೋಡ, ಶ್ರೀನಿವಾಸ ತಾಳೂಕರ, ಕಸ್ತೂರಿ ಬಾವಿ, ಬಸವರಾಜ ಖಾನಪ್ಪನವರ ಸೇರಿದಂತೆ 37 ಮಂದಿ ಹೋರಾಟಗಾರರನ್ನು ಗೌರವಿಸಲಾಯಿತು.

ವಿರೂಪಾಕ್ಷಯ್ಯ ನೀರಲಗಿಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.