ADVERTISEMENT

ಬೆಳಗಾವಿ | ಮಲಪ್ರಭಾ ಕಾರ್ಖಾನೆ ಅಕ್ರಮಗಳ ತನಿಖೆಗೆ ಆದೇಶ

ಸಚಿವ ಶಿವಾನಂದ ಪಾಟೀಲ ಅನುಮೋದನೆ: ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌.ಸಿ. ಇಂಗಳಗಿ, ನಿವೃತ್ತ ಹೆಚ್ಚುವರಿ ನಿಬಂಧಕ ಎಸ್‌.ಎಂ. ಕಲೂತಿ ನೇಮಕ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 2:52 IST
Last Updated 2 ಆಗಸ್ಟ್ 2025, 2:52 IST
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ   

ಬೆಳಗಾವಿ: ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ನಿಯಮಬಾಹಿರ ಚಟುವಟಿಕೆಗಳು ಹಾಗೂ ಅವ್ಯವಹಾರ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ವಿಚಾರಣಾಧಿಕಾರಿಗಳನ್ನು ನೇಮಕ ಮಾಡಿದೆ. ಮೂರು ತಿಂಗಳಲ್ಲಿ ತನಿಖಾ ವರದಿಯನ್ನೂ ಕೋರಿದೆ.

ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅನುಮೋದನೆ ಮೇರೆಗೆ ವಿಚಾರಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

2018–19ರಿಂದ 2022–23ರವರೆಗೆ ನಡೆದಿದೆ ಎನ್ನಲಾದ ಅವ್ಯವಹಾರ, ಸಕ್ಕರೆ ಮಾರಾಟ ಹಾಗೂ ಸಂಗ್ರಹ ಸಾಮಗ್ರಿ ಖರೀದಿಯಲ್ಲಿನ ಅಕ್ರಮ, ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರದಲ್ಲಿನ ನಿಯಮಬಾಹಿರ ಚಟುವಟಿಕೆ ಕುರಿತು ಎಲ್ಲ ಕಾನೂನಾತ್ಮಕ ಅಂಶಗಳನ್ನೊಳಗೊಂಡು ವಿಸ್ತೃತ ತನಿಖೆ ನಡೆಸುವ ಅಗತ್ಯವಿದೆ ಎಂಬುದನ್ನು ಮನಗಂಡು ಸರ್ಕಾರ ಜಂಟಿ ತನಿಖೆಗೆ ಆದೇಶ ಮಾಡಿದೆ.

ಅಕ್ರಮ ಆರೋಪಗಳ ಬಗ್ಗೆ ವಿವರಣೆ ಕೇಳಿ ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಿದ್ದರೂ ಗೈರಾಗಿದ್ದರು. ಹೀಗಾಗಿ ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌.ಸಿ. ಇಂಗಳಗಿ ಮತ್ತು ಸಹಕಾರ ಇಲಾಖೆ ನಿವೃತ್ತ ಹೆಚ್ಚುವರಿ ನಿಬಂಧಕ ಎಸ್‌.ಎಂ. ಕಲೂತಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸೂಚನೆ ನೀಡಿದೆ.

ADVERTISEMENT

ಸಚಿವ ಶಿವಾನಂದ ಪಾಟೀಲ ಅವರು ಈಚೆಗೆ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಖಾನೆಯ ದುಸ್ಥಿತಿಯ ಬಗ್ಗೆ ರೈತ ಮುಖಂಡರು ಗಂಭೀರ ಆರೋಪಗಳನ್ನು ಮಾಡಿದ್ದರು. ಆಡಳಿತ ಮಂಡಳಿ ನಷ್ಟಕ್ಕೆ ಕಾರಣಗಳನ್ನು ನೀಡಿ ಸಮರ್ಥನೆ ಮಾಡಿಕೊಂಡಿತ್ತು.

ಈ ಹಿಂದಿನ ಆಡಳಿತ ಮಂಡಳಿ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಲೋಪವೇ ಕಾರ್ಖಾನೆ ದುಸ್ಥಿತಿಗೆ ಕಾರಣ. ಆಡಳಿತ ಮಂಡಳಿಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿದವು. ದೊಡ್ಡ ಪ್ರಮಾಣದ ಸಕ್ಕರೆ ದಾಸ್ತಾನನ್ನು ಅಕ್ರಮವಾಗಿ ದಾಸ್ತಾನು ಮಾಡಿ ದುರ್ಬಳಕೆ ಮಾಡಿಕೊಂಡರು. ಈ ಅಕ್ರಮವನ್ನು ಪತ್ತೆ ಮಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಅಕ್ರಮ ಸಾಬೀತಾಗಿದೆ ಎಂದು ರೈತ ಮುಖಂಡರು ಸಚಿವರಿಗೆ ವಿವರಿಸಿದ್ದರು.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ರೈತ ಮುಖಂಡರ ತಿಕ್ಕಾಟದಿಂದ ಈ ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟಕ್ಕೆ ಬರಲು ಕಾರಣ ಎಂದು ಆಡಳಿತ ಮಂಡಳಿ ಅಧ್ಯಕ್ಷರು ಸಚಿವರಿಗೆ ವಿವರಣೆ ನೀಡಿದ್ದರು. ಈ ಕಾರ್ಖಾನೆಯನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸರ್ಕಾರ ಸೂಕ್ತ ನಿರ್ದಾರ ಕೈಗೊಂಡು ಕಾರ್ಖಾನೆಯನ್ನು ನಡೆಸಲು ಮುಂದೆ ಬರಬೇಕು ಎಂದು ಕಾರ್ಮಿಕರು ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದ್ದರು.

ರುದ್ರಪ್ಪ ಮೊಕಾಶಿ ಅವರ ತಂಡ ಆಡಳಿತದ ಜವಾಬ್ದಾರಿ ವಹಿಸಿಕೊಂಡಿದ್ದಾಗ ಕಾರ್ಖಾನೆ ನಷ್ಟದಲ್ಲಿತ್ತು. ಮೂರು ವರ್ಷಗಳ ಅವಧಿಯಲ್ಲಿ ಈ ಕಾರ್ಖಾನೆಯ ಸಾಲ ತೀರಿಸಿ ಲಾಭದತ್ತ ಮುನ್ನಡೆಸಿ ₹15 ಕೋಟಿಯನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಆದರೆ, ನಂತರ ಅಧಿಕಾರಕ್ಕೆ ಬಂದವರ ದುರಾಡಳಿತದಿಂದ ಕಾರ್ಖಾನೆ ನಷ್ಟಕ್ಕೀಡಾಯಿತು ಎಂದು ರೈತ ಮುಖಂಡ ಬಸವರಾಜ ಮೊಕಾಶಿ ವಿವರಿಸಿದ್ದರು.

ಕಾರ್ಖಾನೆಯ ಇಂದಿನ ದುಃಸ್ಥಿತಿಗೆ ಕಾರಣವಾಗಿರುವ ಆಡಳಿತ ಮಂಡಳಿಯನ್ನು ತಕ್ಷಣ ವಜಾ ಮಾಡಬೇಕು, ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಹಣ ವಸೂಲು ಮಾಡಬೇಕು, ನಷ್ಟದಲ್ಲಿದ್ದರೂ ಇನ್ನೂ ನಡೆದಿರುವ ಲೂಟಿ ತಪ್ಪಿಸಬೇಕು, ಸರ್ಕಾರದಿಂದ ನೆರವು ನೀಡಿ ಕಾರ್ಖಾನೆ ನಡೆಸಬೇಕು ಹಾಗೂ ಎಂ.ಡಿ ಹುದ್ದೆಗೆ ಸರ್ಕಾರಿ ಅಧಿಕಾರಿಯನ್ನೇ ನೇಮಿಸಬೇಕು ಎಂದು ರೈತ ಮುಖಂಡರು ಸಚಿವರನ್ನು ಒತ್ತಾಯಿಸಿದ್ದರು.

2018–19ರಿಂದ 2022–23ರವರೆಗೆ ಅಕ್ರಮ ನಡೆದ ಆರೋಪ ನೋಟಿಸ್‌ ನೀಡಿದರೂ ಸಂಬಂಧಪಟ್ಟವರು ಗೈರು ಮೂರು ತಿಂಗಳಲ್ಲಿ ತನಿಖಾ ವರದಿ ಕೋರಿದ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.