ಬೆಳಗಾವಿ: ಅನುದಾನ ಕೊರತೆಯಿಂದಾಗಿ, ಅಂಗವಿಕಲರೊಂದಿಗೆ ಹಸೆಮಣೆ ಏರಿದ ದೈಹಿಕ ಸಮರ್ಥರಿಗೆ ಸಕಾಲಕ್ಕೆ ಪ್ರೋತ್ಸಾಹಧನ ಸಿಗುತ್ತಿಲ್ಲ. ಹಾಗಾಗಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದವರು ಪರದಾಡುವಂತಾಗಿದೆ.
ಅಂಗವಿಕಲರು– ಸಾಮಾನ್ಯರ ಮದುವೆ ಪ್ರೋತ್ಸಾಹಿಸಲು ಸರ್ಕಾರ ಪ್ರೋತ್ಸಾಹಧನ ಯೋಜನೆ ಜಾರಿಗೆ ತಂದಿದೆ. ಇದರಡಿ ಸಾಮಾನ್ಯರು ಅಂಗವಿಕಲರನ್ನು ವರಿಸಿದರೆ, ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಸೌಲಭ್ಯ ಕೋರಿ ಜಿಲ್ಲಾ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 2022ರ ಏಪ್ರಿಲ್ 1ರಿಂದ 2025ರ ಜನವರಿ 15ರವರೆಗೆ(33 ತಿಂಗಳಲ್ಲಿ) 50 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 22 ಜೋಡಿಗೆ ಪ್ರೋತ್ಸಾಹಧನ ಬಿಡುಗಡೆಯಾಗಿದೆ. 28 ಜೋಡಿಗೆ ನೀಡುವುದು ಬಾಕಿ ಇದೆ.
‘ಈ ಹಿಂದೆ ಅರ್ಜಿ ಸಲ್ಲಿಸಿದ ಕೆಲವೇ ತಿಂಗಳಲ್ಲಿ ಪ್ರೋತ್ಸಾಹಧನ ಫಲಾನುಭವಿಗಳ ಕೈಗೆಟುಕುತ್ತಿತ್ತು. ಅನುದಾನದ ಅಭಾವ ಇರುವ ಕಾರಣ, ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದವರಿಗೂ ಈಗ ಪ್ರೋತ್ಸಾಹಧನ ಸಿಗುತ್ತಿಲ್ಲ’ ಎಂಬುದು ಫಲಾನುಭವಿಗಳ ದೂರು.
‘ಎರಡು ವರ್ಷವಾಗುತ್ತ ಬಂತು’
‘ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ನಾನು ಮತ್ತು ಧಾರವಾಡ ಜಿಲ್ಲೆಯ ಅಮ್ಮಿನಭಾವಿಯ ಸಾಮಾನ್ಯ ಯುವತಿ ವಿವಾಹವಾಗಿದ್ದೇವೆ. ಇನ್ನೆರಡು ತಿಂಗಳಿಗೆ ನಾವು ವಿವಾಹವಾಗಿ ಎರಡು ವರ್ಷವಾಗಲಿದೆ. ಮದುವೆಯಾದ ಬೆನ್ನಲ್ಲೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಪ್ರೋತ್ಸಾಹಧನ ಕೊಟ್ಟಿಲ್ಲ. ತ್ವರಿತವಾಗಿ ಸೌಲಭ್ಯ ಒದಗಿಸಬೇಕು’ ಎಂದು ಸವದತ್ತಿ ತಾಲ್ಲೂಕಿನ ಚುಳಕಿಯ ಗದಿಗೆಪ್ಪ ನರಸಿಂಗನವರ ‘ಪ್ರಜಾವಾಣಿ’ಗೆ ತಿಳಿಸಿದರು.
5 ವರ್ಷ ಠೇವಣಿ ಇರಿಸಬೇಕು:
‘ವಿವಾಹ ನೋಂದಣಿ ಪತ್ರ, ವಾಸ್ತವ್ಯದ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ನೀಡಲಾಗುವ ₹50 ಸಾವಿರ ಪ್ರೋತ್ಸಾಹಧನವನ್ನು ದಂಪತಿ ಹೆಸರಿನಲ್ಲಿ ಜಂಟಿ ಖಾತೆಯಲ್ಲಿ ಐದು ವರ್ಷದ ಅವಧಿಗೆ ಠೇವಣಿ ಇರಿಸಲಾಗುತ್ತದೆ. ಅದರಲ್ಲಿ ಬರುವ ಬಡ್ಡಿ ಹಣವನ್ನು ಕುಟುಂಬದ ನಿರ್ವಹಣೆಗೆ ಬಳಸಬಹುದು. ಆದರೆ, ಮದುವೆಯಾದ ಐದು ವರ್ಷಗಳ ನಂತರವೇ ಪೂರ್ತಿ ಹಣ ಕೈಗೆಟುಕುಗುತ್ತದೆ. ಎರಡನೇ ಮದುವೆಯಾದವರಿಗೆ ಪ್ರೋತ್ಸಾಹಧನ ಸಿಗಲ್ಲ. ಒಂದು ವೇಳೆ ಮದುವೆಯಾದ ಐದು ವರ್ಷದೊಳಗೆ ವಿಚ್ಛೇದನ ಪಡೆದರೆ, ಪ್ರೋತ್ಸಾಹಧನ ಹಿಂದಕ್ಕೆ ಪಡೆಯಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.