
ಬೈಲಹೊಂಗಲ: ‘ಸತಿಪತಿ ಪರಸ್ಪರ ಹೊಂದಾಣಿಕೆಯಿಂದ ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸಮೀಪದ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧುಸಂಸ್ಥಾನ ಮಠದಲ್ಲಿ ಶುಕ್ರವಾರ ನಡೆದ ಸರ್ವಧರ್ಮ ಸಾಮೂಹಿಕ ವಿವಾಹಗಳ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಜಾತ್ರೆಗಳಲ್ಲಿ ಸಾಮೂಹಿಕ ವಿವಾಹ ಆಗುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತೆ. ಮಹಾತ್ಮರು, ಸಂತರ ಆಶೀರ್ವಾದ ಪಡೆದು ದಂಪತಿಗಳು ಸುಖವಾಗಿ ಸಂಸಾರ ಸಾಗಿಸಬೇಕು’ ಎಂದರು.
ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಸರ್ವಜನಾಂಗದವರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ’ ಎಂದರು.
ಬೀದರ ಚಿದಂಬರ ಆಶ್ರಮದ ಶಿವಕುಮಾರೇಶ್ವರ ಸ್ವಾಮೀಜಿ ಮಾತನಾಡಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಶಿವಾನಂದ ಬೆಳಗಾವಿ, ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಮಾಜಿ ಚೇರಮನ್ ಡಿ.ಬಿ.ಮಲ್ಲೂರ, ಎಸ್.ಎಂ.ರಾಹುತನವರ, ಹಂಪಿಯ ವಿದ್ಯಾನಂದ ಭಾರತಿ ಸ್ವಾಮೀಜಿ, ಆಡಳಿತ ಅಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ, ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಹಡಗಿನಹಾಳದ ಮಲ್ಲೇಶ ಶರಣರು, ಚಂದ್ರು ನರಗುಂದ, ನಾಗಪ್ಪ ಮೇಟಿ, ಬಸವರಾಜ ಜನ್ಮಟ್ಟಿ ಹಾಗೂ ಅನೇಕ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.