ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆ: ಐದು ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ– ನಿರಾಣಿಗೆ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 15:58 IST
Last Updated 9 ಜುಲೈ 2023, 15:58 IST
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್   

‘ಐದು ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ’

ಬೆಳಗಾವಿ: ‘ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಸಂತ್ರಸ್ತರಿಗೆ ₹5 ಸಾವಿರ ಕೋಟಿಯಲ್ಲ, ಐದು ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಿರುಗೇಟು ಕೊಟ್ಟರು.

‘ಕೃಷ್ಣಾ ತೀರದ ಜನರಿಗೆ ಈ ಬಜೆಟ್‌ನಲ್ಲಿ ಅನ್ಯಾಯವಾಗಿದೆ’ ಎಂಬ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಹೇಳಿಕೆಗೆ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

ADVERTISEMENT

‘ಹಿಂದಿನ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಮುಳುಗಡೆ ಸಂತ್ರಸ್ತರಿಗೆ ₹5 ಸಾವಿರ ಕೋಟಿ ಪರಿಹಾರ ಮೀಸಲಿಟ್ಟಿದ್ದೆವು ಎಂದು ನಿರಾಣಿ ಹೇಳುತ್ತಾರೆ. ಆದರೆ, ಇಬ್ಬರಿಗಷ್ಟೇ ಸಾಂಕೇತಿಕವಾಗಿ ಚೆಕ್ ಕೊಡಲಾಗಿದೆ. ಅವರಿಗೆ ಇನ್ನೂ ಹಣವೇ ತಲುಪಿಲ್ಲ. ಇದು ಕಣ್ಣು ಒರೆಸುವ ತಂತ್ರವಷ್ಟೇ’ ಎಂದು ದೂರಿದರು.

‘ಬಿಜೆಪಿ ಅಧಿಕಾರದಲ್ಲಿದ್ದಾಗ ಲೋಕೋಪಯೋಗಿ ಇಲಾಖೆಯಲ್ಲಿ ಬಜೆಟ್‌ಗಿಂತ ₹5 ಸಾವಿರ ಕೋಟಿ ಹಾಗೂ ನೀರಾವರಿ ಇಲಾಖೆಯಲ್ಲಿ ಬಜೆಟ್‌ಗಿಂತ ₹15 ಸಾವಿರ ಕೋಟಿ ಹೆಚ್ಚಿನ ಮೊತ್ತದ ಟೆಂಡರ್ ಕರೆಯಲಾಗಿದೆ. ಇದೆಲ್ಲ ಏಕೆ ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ’ ಎಂದರು.

‘ಈ ಬಜೆಟ್‌ನಿಂದ ಕೃಷ್ಣಾ ತೀರದ ಜನರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿರುವ ನಿರಾಣಿ, ತಾವೇನು ಮಾಡಿದ್ದಾರೆ ಎಂದು ಹೇಳಲಿ’ ಎಂದು ಸವಾಲು ಹಾಕಿದರು.

‘ಲಿಂಗಾಯತ ಮಠಗಳಿಗೆ ಅನುದಾನ ಕಡಿತಗೊಳಿಸಲಾಗಿದೆ’ ಎಂಬ ಮಾಜಿ ಸಚಿವ ಸಿ.ಸಿ.ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ, ‘ಹಿಂದಿನ ಸರ್ಕಾರದಲ್ಲಿ ಬಜೆಟ್‌ಗಿಂತ ಹೆಚ್ಚು ಹಣ ಖರ್ಚು ಮಾಡಿರುವ ಕಾರಣಕ್ಕೆ ಹೆಚ್ಚಿನ ಅನುದಾನ ಕೊಟ್ಟಿಲ್ಲ. ಅನುದಾನ ಇರದಿದ್ದರೂ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ₹40 ಸಾವಿರ ಕೋಟಿಯಿಂದ ₹50 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಬಜೆಟ್‌ಗಿಂತ ಹೆಚ್ಚಿನ ಮೊತ್ತದ ಟೆಂಡರ್‌ ಕರೆದಿರುವ ಉದ್ದೇಶವೇನು? ನೀವು ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನಕ್ಕೆ ಸೀಮಿತವಾಗಿರಬೇಕಿತ್ತಲ್ಲವೇ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ ಏಕೆ ಆಗಿಲ್ಲ ಎಂದು ನಿರಾಣಿ ಅವರನ್ನೇ ಕೇಳಿ. ನಮ್ಮ ಜಿಲ್ಲೆಯವರೇ ಆದರೂ ಸಂತೋಷವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಕುರಿತು ತನಿಖೆ ಆರಂಭವಾಗಿದೆ’ ಎಂದರು.

‘ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗೆ ₹32 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಇದರೊಂದಿಗೆ ಹಲವು ಯೋಜನೆಗಳನ್ನೂ ಘೋಷಿಸಿದ್ದೇವೆ. 8ರಿಂದ 9 ತಿಂಗಳಲ್ಲಿ ಮಂಡಿಸಲಿರುವ ಹೊಸ ಬಜೆಟ್‌ನಲ್ಲಿ ಹೆಚ್ಚಿನ ಯೋಜನೆಗಳಿಗೆ ಅನುದಾನ ಕೊಡುತ್ತೇವೆ. ಕೈಗಾರಿಕೆ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರಲು ಪ್ರಯತ್ನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಕಠಿಣ ಶಿಕ್ಷೆ ನೀಡಬೇಕು: ‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಜೈನ ಮುನಿಗಳನ್ನು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

‘ಕಾಂಗ್ರೆಸ್ ಸರ್ಕಾರದಿಂದ ಒಂದು ಧರ್ಮದ ತುಷ್ಟೀಕರಣ ನಡೆಯುತ್ತಿದೆ. ಮುನಿಗಳ ಕೊಲೆ ಪ್ರಕರಣದಲ್ಲಿ ಸರ್ಕಾರ ಪೊಲೀಸರ ಮೇಲೆ ಒತ್ತಡ ತರುತ್ತಿದೆ’ ಎಂಬ ಶಾಸಕ ಅಭಯ ಪಾಟೀಲ ಹೇಳಿಕೆಗೆ, ‘ಯಾವುದೋ ವಿಷಯವನ್ನು ಯಾವುದಕ್ಕೋ ಹೋಲಿಸಬಾರದು. ಮುನಿಗಳ ಕೊಲೆ ವಿಚಾರದಲ್ಲಿ ರಾಜಕೀಯ ಬೆರೆಸಬಾರದು. ಇದರಲ್ಲಿ ನಮ್ಮ ಪಕ್ಷದ ಪಾತ್ರವೇನಿದೆ?’ ಬೇರೆ ಸರ್ಕಾರಗಳಿದ್ದ ಸಂದರ್ಭದಲ್ಲೂ ಇಂತಹ ಘಟನೆ ನಡೆದಿವೆ. ಇಂತಹ ಹೇಯ ಕೃತ್ಯ ಎಸಗಿದವರನ್ನು ಕ್ಷಮಿಸಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.