ADVERTISEMENT

ಬೆಳಗಾವಿ | ವೈದ್ಯಕೀಯ ತಂತ್ರಜ್ಞಾನ ನಾವೀನ್ಯತಾ ಕೇಂದ್ರ ಸ್ಥಾಪನೆ: ಪ್ರಭಾಕರ ಕೋರೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2023, 13:19 IST
Last Updated 17 ನವೆಂಬರ್ 2023, 13:19 IST
<div class="paragraphs"><p>ಪ್ರಭಾಕರ ಕೋರೆ</p></div>

ಪ್ರಭಾಕರ ಕೋರೆ

   

ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕಾಹೇರ್‌ಯಲ್ಲಿ ವೈದ್ಯಕೀಯ ತಂತ್ರಜ್ಞಾನ ನಾವೀನ್ಯತಾ ಕೇಂದ್ರ(ಇನ್‌ಕ್ಯುಬೇಷನ್‌ ಅಂಡ್‌ ಇನ್ನೋವೇಷನ್ ಸೆಂಟರ್‌) ಸ್ಥಾಪಿಸಲಾಗಿದೆ. ವಿಜ್ಞಾನ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳಲು ನವೋದ್ಯಮಿಗಳು ಹಾಗೂ ಸಂಶೋಧಕರಿಗೆ ಇದು ಪೂರಕ ವಾತಾವರಣ ಒದಗಿಸಲಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೀನ ಪರಿಕಲ್ಪನೆ ಹೊಂದಿರುವವರಿಗೆ ಸಂಶೋಧನೆ ಕೈಗೊಳ್ಳಲು ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳೊಂದಿಗೆ ವೇದಿಕೆ ಒದಗಿಸಲಿದೆ. ಆರಂಭಿಕವಾಗಿ ನಾವು ₹3 ಕೋಟಿ ನಿಧಿ ಭರಿಸುತ್ತೇವೆ. ಮುಂದಿನ ತಿಂಗಳು ಇದು ಕಾರ್ಯಾರಂಭ ಮಾಡಲಿದೆ. ಈ ಪ್ರದೇಶದಲ್ಲಿ ಮೊದಲ ಬಾರಿ ಆರಂಭವಾಗುತ್ತಿರುವ ಈ ಕೇಂದ್ರ ಆರ್ಥಿಕತೆ ಸುಧಾರಣೆ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆ ಇದೆ’ ಎಂದರು.

ADVERTISEMENT

‘ಗೇಟ್ಸ್‌ ಫೌಂಡೇಷನ್‌ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್‌ (ಐಸಿಎಂಆರ್‌) ನಮ್ಮೊಂದಿಗೆ ಕೈಜೋಡಿಸಿವೆ. ವೈದ್ಯಕೀಯ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಈ ಕೇಂದ್ರ ಮಹತ್ತರ ಪಾತ್ರ ವಹಿಸಲಿದೆ. ಇಲ್ಲಿ ಆರಂಭಗೊಳ್ಳುವ ಸ್ಟಾರ್ಟಪ್‌ಗಳಿಗೆ ಶೈಕ್ಷಣಿಕ ಸಂಪನ್ಮೂಲ, ಅಗತ್ಯ ಮಾಹಿತಿ, ಮಾರ್ಗದರ್ಶನ, ನೆಟ್‌ವರ್ಕಿಂಗ್ ಮತ್ತು ಅನುಭವಿಗಳಿಂದ ಸಹಕಾರ ಸಿಗಲಿದೆ’ ಎಂದರು.

‘ಸಂಶೋಧಕರು ತಮ್ಮ ಪರಿಕಲ್ಪನೆ ಮತ್ತು ಆಲೋಚನೆಯನ್ನು ಆಯ್ಕೆ ಸಮಿತಿ ಮುಂದೆ ಪ್ರಸ್ತುತಪಡಿಸಬೇಕು. ಅದನ್ನು ಪರಿಶೀಲಿಸಿದ ಬಳಿಕ, ಅಗತ್ಯ ಸೌಲಭ್ಯ ಒದಗಿಸಲಾಗುತ್ತದೆ. ಸಂಶೋಧಕರಿಗೆ ಮಾರ್ಗದರ್ಶನ ನೀಡಲು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಪರಿಣತ ತಂತ್ರಜ್ಞರನ್ನು ಗುರುತಿಸಿದ್ದೇವೆ’ ಎಂದು ತಿಳಿಸಿದರು.

ಪಾಲುದಾರಿಕೆಗೆ ಪ್ರಯತ್ನ:

‘ವೈದ್ಯಕೀಯ, ದಂತವೈದ್ಯಕೀಯ, ಔಷಧ ವಿಜ್ಞಾನ ಮತ್ತು ಆಯುರ್ವೇದ ಕ್ಷೇತ್ರಗಳಲ್ಲಿ ನಮ್ಮ ವಿಶ್ವವಿದ್ಯಾಲಯ ಹೆಚ್ಚಿನ ಪೇಟೆಂಟ್‌ಗಳನ್ನು ಹೊಂದಿದೆ. ಹೊಸ ಕಂಪನಿಗಳನ್ನು ಆರಂಭಿಸಲು ಉದ್ಯಮಶೀಲತೆ ಸಾಮರ್ಥ್ಯವೂ ವಿಶ್ವವಿದ್ಯಾಲಯಕ್ಕಿದೆ’ ಎಂದ ಅವರು, ‘ದೇಶದಲ್ಲಿರುವ ಇತರೆ ಸ್ಟಾರ್ಟಪ್‌ಗಳು, ಹೂಡಿಕೆದಾರರು ಮತ್ತು ಆರೋಗ್ಯ ಪೂರೈಕೆದಾರರು ಸಂಪರ್ಕ ಸಾಧಿಸಲು ಈ ಕೇಂದ್ರ ಅವಕಾಶಗಳನ್ನು ಒದಗಿಸಲಿದೆ. ಕೇಂದ್ರಕ್ಕೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕಾನ್ಪುರದ ಐಐಟಿ ಮತ್ತು ಇತರರೊಂದಿಗೆ ಪಾಲುದಾರಿಕೆ ಹೊಂದಲು ಪ್ರಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.

ಕಾಹೇರ್‌ ಕುಲಪತಿ ಡಾ.ನಿತಿನ್‌ ಗಂಗಾನೆ, ‘ಹೊಸ ವೈದ್ಯಕೀಯ ತಾಂತ್ರಿಕ (ಮೆಡ್–ಟೆಕ್) ಉತ್ಪನ್ನ ಮತ್ತು ಸೇವೆಗಳನ್ನು ಈ ಕೇಂದ್ರ ಅಭಿವೃದ್ಧಿಪಡಿಸುತ್ತದೆ. ಜತೆಗೆ, ವಾಣಿಜ್ಯೀಕರಣಗೊಳಿಸಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ. ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನ ವಲಯದಲ್ಲಿನ ಸ್ಟಾರ್ಟಪ್‌ಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಾತ್ರ ಮೀಸಲಾಗಿದೆ’ ಎಂದು ತಿಳಿಸಿದರು.

ಕುಲಸಚಿವ ಡಾ.ಎಂ.ಎಸ್‌.ಗಣಾಚಾರಿ, ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಎಸ್‌.ಎಸ್‌.ಗೌಡರ, ಹಾಸ್ಪಿಟಲ್‌ ಡೆವ‌ಲಪ್‌ಮೆಂಟ್‌ ಮತ್ತು ನ್ಯೂ ಪ್ರಾಜೆಕ್ಟ್ಸ್‌ ವಿಭಾಗದ ನಿರ್ದೇಶಕ ಡಾ.ವಿ.ಡಿ.ಪಾಟೀಲ, ಜೆಎನ್‌ಎಂಸಿ ಪ್ರಾಚಾರ್ಯರಾದ ಡಾ.ಎನ್‌.ಎಸ್‌.ಮಹಾಂತಶೆಟ್ಟಿ, ಯೋಗೇಶ ಕುಲಕರ್ಣಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.