ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
– ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಮತ್ತು ಕನ್ನಡ ಅನುಷ್ಠಾನ ವಿರೋಧಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಆದರೆ, ನಿರೀಕ್ಷೆಯಂತೆ ಜನ ಸೇರಲಿಲ್ಲ.
ಬೆಳಗಾವಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆಗೆ ಎಂಇಎಸ್ ಯೋಜಿಸಿತ್ತು. ಬೆಳಗಾವಿ, ಖಾನಾಪುರ, ನಿಪ್ಪಾಣಿ ಮತ್ತಿತರ ಕಡೆ ಸರಣಿ ಸಭೆ ನಡೆಸಿ, ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಪ್ರಯತ್ನಿಸಿತ್ತು. ಧರ್ಮವೀರ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸುವುದಾಗಿ ಕರೆಕೊಟ್ಟಿತ್ತು.
ಆದರೆ, ಮೆರವಣಿಗೆಗೆ ಪೊಲೀಸರು ಅನುಮತಿ ಕೊಡಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರೇ ಸಮಾವೇಶಗೊಂಡ ಕಾರ್ಯಕರ್ತರು, ‘ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ’, ‘ಇರುವುದಾದರೆ ಮಹಾರಾಷ್ಟ್ರದಲ್ಲಿ ಇಲ್ಲವೇ ಜೈಲಿನಲ್ಲಿ’ ಎಂದು ಘೋಷಣೆ ಕೂಗಿದರು. ‘ಇದು ನಾಲಾಯಕ್ ಸರ್ಕಾರ’ ಎಂದು ರಾಜ್ಯ ಸರ್ಕಾರ ನಿಂದಿಸಿದರು.
‘ಭಾಷಾ ಅಲ್ಪಸಂಖ್ಯಾತ ಕಾಯ್ದೆ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಶೇ 15ಕ್ಕಿಂತ ಹೆಚ್ಚು ಮರಾಠಿ ಭಾಷಿಕರಿದ್ದರೆ ಮರಾಠಿಯಲ್ಲೇ ದಾಖಲೆ ನೀಡಬೇಕು. ಅದರ ಪ್ರಕಾರ ಬೆಳಗಾವಿ, ಖಾನಾಪುರ, ನಿಪ್ಪಾಣಿ ಮತ್ತಿತರ ತಾಲ್ಲೂಕುಗಳ ಸರ್ಕಾರಿ ಕಚೇರಿಗಳಲ್ಲಿ ಮರಾಠಿಯಲ್ಲೇ ದಾಖಲೆ ಕೊಡಬೇಕು’ ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಮನೋಹರ ಕಿಣೇಕರ, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೆಳಗಾವಿ ಪಾಲಿಕೆ ಕಚೇರಿಗೆ ಭೇಟಿ ನೀಡಿದ ನಂತರ, ಅಲ್ಲಿದ್ದ ಮರಾಠಿ ಫಲಕಗಳನ್ನೆಲ್ಲ ತೆಗೆದುಹಾಕಲಾಗಿದೆ. ಅವುಗಳನ್ನು ಮರುಸ್ಥಾಪಿಸಬೇಕು. ಮೇಯರ್, ಉಪಮೇಯರ್ ಬಳಸುವ ಸರ್ಕಾರಿ ವಾಹನಗಳ ನಾಮಫಲಕದ ಮೇಲೆ ಮರಾಠಿಯನ್ನೂ ಬಳಸಬೇಕು. ನಗರದ ಅಂಗಡಿ–ಮುಂಗಟ್ಟುಗಳ ಮೇಲೆ ಮರಾಠಿಯಲ್ಲಿದ್ದ ನಾಮಫಲಕಗಳು ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ಅವುಗಳನ್ನು ಮತ್ತೆ ಅಳವಡಿಸಲು ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು.
‘ಒಂದು ತಿಂಗಳೊಳಗೆ ನಮ್ಮ ಬೇಡಿಕೆಗಳನ್ನು ಕರ್ನಾಟಕ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಮತ್ತೆ ಉಗ್ರಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.
ಎಂಇಎಸ್ ಬೆಂಬಲಿತ ಪಾಲಿಕೆ ಸದಸ್ಯ ರವಿ ಸಾಳುಂಕೆ, ‘ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರ ತನ್ನ ಹಕ್ಕು ಮಂಡಿಸಿದ ಮತ್ತು ಮರಾಠಿ ಮಾತನಾಡುವ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಹೇರಿಕೆ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಮಾಲೋಜಿರಾವ್ ಅಷ್ಟೇಕರ, ರಮಾಕಾಂತ ಕೊಂಡೂಸ್ಕರ್, ಶುಭಂ ಶೆಳಕೆ ಇತರರಿದ್ದರು.
ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.