ADVERTISEMENT

ಬೆಳಗಾವಿ: ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಪ್ರತಿಭಟನಾ ಸಭೆ

ಕಪ್ಪು ಪಟ್ಟಿ ಕಟ್ಟಿಕೊಂಡು ಪಾಲ್ಗೊಂಡಿದ್ದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 17:36 IST
Last Updated 1 ನವೆಂಬರ್ 2020, 17:36 IST
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್‌ನಿಂದ ಭಾನುವಾರ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಕಾರ್ಯಕರ್ತರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪಾಲ್ಗೊಂಡಿದ್ದರು
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್‌ನಿಂದ ಭಾನುವಾರ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಕಾರ್ಯಕರ್ತರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪಾಲ್ಗೊಂಡಿದ್ದರು   

ಬೆಳಗಾವಿ: ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮತ್ತುಶಿವಸೇನೆಯವರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಇಲ್ಲಿನ ಮರಾಠಾ ಮಂದಿರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಪ್ರತಿಭಟನಾ ಸಭೆ ನಡೆಸಿದರು.

ಜಿಲ್ಲಾಡಳಿತದಿಂದ ಅನುಮತಿ ನೀಡಿಲ್ಲದಿದ್ದರೂ ಸಭೆ ನಡೆಸಿದ ಅವರು, ‘ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು’, ‘ರಹೆಂಗೇ ತೋ ಮಹಾರಾಷ್ಟ್ರ ಮೇ, ನಹೀ ತೋ ಜೈಲ್ ಮೇ’ ಮೊದಲಾದ ಘೋಷಣೆಗಳನ್ನು ಕೂಗಿದರು.

ಎಂಇಎಸ್‌ಗೆ ಧಿಕ್ಕಾರ ಕೂಗುತ್ತಾ ಸಭೆಗೆ ನುಗ್ಗಲು ಯತ್ನಿಸಿದ ಕನ್ನಡ ಅಭಿಮಾನಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದರು. ಅವರು ತಂದಿದ್ದ ಕನ್ನಡ ಧ್ವಜ ಕಸಿದುಕೊಂಡರು.

ADVERTISEMENT

ಇದೇ ವೇಳೆ ಬಂದ ಎಂಇಎಸ್ ನಾಯಕಿ, ಮಾಜಿ ಉಪ ಮೇಯರ್ ರೇಣು ಕಿಲ್ಲೇಕರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಹಾರಾಷ್ಟ್ರದ ಎನ್‌ಸಿಪಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾಲಿ ಚಾಕನಕರ ಪಾಲ್ಗೊಂಡಿದ್ದರು. ‘ವರಿಷ್ಠ ಶರದ್ ಪವಾರ್ ಆದೇಶ ಮೇರೆಗೆ ಬಂದಿದ್ದೇನೆ. ಕರ್ನಾಟಕ ಸರ್ಕಾರ ಕರಾಳ ದಿನಕ್ಕೆ ಅನುಮತಿ ಕೊಡದಿದ್ದರೂ ನಾವು ಮಹಾರಾಷ್ಟ್ರದಲ್ಲಿ ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ್ದೇವೆ. ಪೊಲೀಸರು ತಡೆಯುತ್ತಾರೆಂದು ಗೊತ್ತಿತ್ತು; ಅವರ ಕಣ್ತಪ್ಪಿಸಿ ಬಂದಿದ್ದೇನೆ’ ಎಂದು ತಿಳಿಸಿದರು.

‘ಗಡಿ ಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿದರು.

ಕನ್ನಡ ಹೋರಾಟಗಾರರು ವಶಕ್ಕೆ

ಎಂಇಎಸ್ ಸಭೆಗೆ ಮುತ್ತಿಗೆ ಹಾಕಲು ಬರುತ್ತಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ರೈಲ್ವೆ ಮೇಲ್ಸೇತುವೆ ಬಳಿಯಲ್ಲೇ ತಡೆದರು. ಈ ವೇಳೆ ತಳ್ಳಾಟ–ನೂಕಾಟ ನಡೆಯಿತು. ಪೊಲೀಸರ ವಿರುದ್ಧ ಕಾರ್ಯಕರ್ತರು ಧರಣಿ ನಡೆಸಿದರು.

‘ಕೋವಿಡ್ ನೆಪವೊಡ್ಡಿ ರಾಜ್ಯೋತ್ಸವ ಮೆರವಣಿಗೆ ನಡೆಸಲು ನಮಗೆ ಅವಕಾಶ ಕೊಡಲಿಲ್ಲ. ಆದರೆ, ಎಂಇಎಸ್‌ ಸಭೆಗೆ ಅವಕಾಶ ಕೊಟ್ಟಿದ್ದೇಕೆ’ ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಪೊಲೀಸರನ್ನು ಪ್ರಶ್ನಿಸಿದರು.

‘ಬೆಳಗಾವಿಯಲ್ಲೇ ಇದ್ದುಕೊಂಡು ಕರಾಳ ದಿನ ಆಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಬಳಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ನಂತರ ಬಿಡುಗಡೆ ಮಾಡಿದರು.

ಎಂಇಎಸ್‌ಗೆ ಮಹಾರಾಷ್ಟ್ರ ಸಚಿವರ ಬೆಂಬಲ

ಬೆಳಗಾವಿ: ಮಹಾರಾಷ್ಟ್ರ ಸಚಿವರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಾರ್ಯನಿರ್ವಹಿಸುವ ಮೂಲಕ, ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಇಲ್ಲಿ ಎಂಇಎಸ್ ನಡೆಸುವ ಕರಾಳ ದಿನಾಚರಣೆಯನ್ನು ಬೆಂಬಲಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಂಬೈನಲ್ಲಿ ಮಾತನಾಡಿದ ಅಲ್ಲಿನ ಸಚಿವ ಜಯಂತ ಪಾಟೀಲ, ‘ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ನಮ್ಮ ಸರ್ಕಾರವೂ ಹೋರಾಡುತ್ತದೆ. ಎನ್‌ಸಿಪಿ ಕಾರ್ಯಕರ್ತರೂ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

‘ಕರ್ನಾಟಕದ ಗಡಿ ಭಾಗದ ಮರಾಠಿ ಭಾಷಿಕರ ಪರವಾಗಿ ನಮ್ಮ ಸರ್ಕಾರವಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಮರಾಠಿ ಭಾಷಿಕರ ಮೇಲಿನ ದಬ್ಬಾಳಿಕೆ ನಿಂತಿಲ್ಲ. ಮರಾಠಿ ಭಾಷಿಕರಿರುವ ಕರ್ನಾಟಕದ ಗಡಿ ಪ್ರದೇಶ ಶೀಘ್ರವೇ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ’ ಎಂದು ಗೊತ್ತಾಗಿದೆ.

‘ಸೂರ್ಯ–ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ್ದೇ’ ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅಲ್ಲಿನ ಇನ್ನೊಬ್ಬ ಸಚಿವ ಹಸನ್ ಶರೀಫ್, ‘ಆ ಉಪ ಮುಖ್ಯಮಂತ್ರಿ ಅಧಿಕಾರದ ಅವಧಿ ಮುಗಿಯುವ ಮೊದಲೇ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಸಂಭ್ರಮ ವೇಳೆ ಲಾಠಿ ಪ್ರಹಾರ

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಗುಂಪು ಗುಂಪಾಗಿ ಸೇರಿ ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಕೋವಿಡ್ ಕಾರಣದಿಂದಾಗಿ ಈ ಬಾರಿ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಆದರೂ ಚನ್ನಮ್ಮ ವೃತ್ತದಲ್ಲಿ ನೂರಾರು ಮಂದಿ ಸೇರಿದ್ದರು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿದರು. ಹೋಟೆಲ್ ವೊಂದರ ಬಳಿ ನಿಂತಿದ್ದವರ ಮೇಲೂ ಪೊಲೀಸರು ಲಾಠಿ ಪ್ರಯೋಗಿಸಿದರು. ತಪ್ಪಿಸಿಕೊಳ್ಳಲು ಓಡಿದ ಕೆಲವರು ಆಯತಪ್ಪಿ ಬಿದ್ದ ಘಟನೆಯೂ ನಡೆಯಿತು.

ಕೆಲವು ದುಷ್ಕರ್ಮಿಗಳು ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ
ಬಸ್‌ಗೆ ಕಲ್ಲು ತೂರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎನ್ನಲಾಗುತ್ತಿದೆ. ಆದರೆ, ಅದನ್ನು ಪೊಲೀಸರು ನಿರಾಕರಿಸಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲನೆಯಾಗದ ಕಾರಣ ಗುಂಪು ಚದುರಿಸಲಾಯಿತು ಎಂದು ತಿಳಿಸಿದ್ದಾರೆ.

ಪೊಲೀಸರ ಕ್ರಮ ಖಂಡಿಸಿ ಯುವಕರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಚುನಾವಣಾ ಪ್ರಚಾರಕ್ಕೆ ಕೋವಿಡ್ ಅನ್ವಯವಾಗುವುದಿಲ್ಲವೇ? ರಾಜ್ಯೋತ್ಸವ ಮೆರವಣಿಗೆ ಅವಕಾಶ ಕೊಡುವುದಿಲ್ಲವೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

***

ಎಂಇಎಸ್‌ನವರು ಪ್ರತಿಭಟನೆ ನಡೆಸುತ್ತಾರೆ, ಹೋಗುತ್ತಾರೆ. ಅದಕ್ಕೆಲ್ಲ ಮಹತ್ವ ಇಲ್ಲ. ಮಹಾರಾಷ್ಟ್ರ ಸಚಿವರ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ
-ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

***

ಕರ್ನಾಟಕದಲ್ಲಿ ಮರಾಠಿ ಭಾಷಿಗರ ಮೇಲೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದರ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲ ಇದೆ.

- ಜಯಂತ ಪಾಟೀಲ, ಮಹಾರಾಷ್ಟ್ರ ಸಚಿವ

***

ಸಭೆಗೆ ಜಿಲ್ಲಾಡಳಿತದಿಂದಾಗಲಿ, ಪೊಲೀಸ್ ಇಲಾಖೆಯಿಂದಾಗಲಿ ಅನುಮತಿ ಕೊಟ್ಟಿರಲಿಲ್ಲ. ಆದಾಗ್ಯೂ ಸಭೆ ನಡೆಸಿದವರ ವಿರುದ್ಧ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ
- ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.