MES ಕಾರ್ಯಕರ್ತರಿಂದ ಬೆಳಗಾವಿ ಡಿಸಿಗೆ ಮನವಿ
ಬೆಳಗಾವಿ: ‘ಬೆಳಗಾವಿ, ಖಾನಾಪುರ, ನಿಪ್ಪಾಣಿ ಮತ್ತು ಅಥಣಿ ತಾಲ್ಲೂಕುಗಳಲ್ಲಿ ಅಳವಡಿಸಿರುವ ಮರಾಠಿ ಮತ್ತು ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸಬಾರದು’ ಎಂದು ಒತ್ತಾಯಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮುಖಂಡ ಮನೋಹರ ಕಿಣೇಕರ, ‘ಕನ್ನಡ ಅನುಷ್ಠಾನದ ಹೆಸರಿನಲ್ಲಿ ರಾಜ್ಯ ಸರ್ಕಾರ ಮರಾಠಿಗರ ಮೇಲೆ ಅನ್ಯಾಯ ಮಾಡುತ್ತಿದೆ. ಭಾಷಾ ಅಲ್ಪಸಂಖ್ಯಾತ ಕಾಯ್ದೆ ಪ್ರಕಾರ ಯಾವ ಸೌಕರ್ಯ ಕೊಡದೆ ಸತಾಯಿಸುತ್ತಿದೆ. ಕನ್ನಡ ಫಲಕ ಪ್ರದರ್ಶಿಸುವಂತೆ ತಿಳಿಸಿ, ಮರಾಠಿ, ಇಂಗ್ಲಿಷ್ ಭಾಷೆಯಲ್ಲಿನ ನಾಮಫಲಕ ತೆರವುಗೊಳಿಸುತ್ತಿದೆ. ಇದರಿಂದಾಗಿ ಬೆಳಗಾವಿ, ಖಾನಾಪುರ, ನಿಪ್ಪಾಣಿ ಮತ್ತು ಅಥಣಿ ತಾಲ್ಲೂಕುಗಳಲ್ಲಿ ಕನ್ನಡ ಓದಲು ಬಾರದ ಮರಾಠಿಗರು ಪರದಾಡುವಂತಾಗಿದೆ’ ಎಂದರು.
‘ಇಂಗ್ಲಿಷ್, ಮರಾಠಿಯಲ್ಲಿನ ಫಲಕಗಳನ್ನು ತೆರವುಗೊಳಿಸವುದನ್ನು ನಿಲ್ಲಿಸಬೇಕು. 10 ದಿನಗಳಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ಪ್ರಕಾಶ ಮರಗಾಲೆ, ಎಂ.ಜಿ.ಪಾಟೀಲ, ಅಮರ ಯಳ್ಳೂರಕರ, ಸುಧೀರ ಚವ್ಹಾಣ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.