
ಮೈಕ್ರೊ ಫೈನಾನ್ಸ್ ಕಿರುಕುಳ ನಿಲ್ಲಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ಮೈಕ್ರೊ ಫೈನಾನ್ಸ್ ಹಾವಳಿಗೆ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೈಲಹೊಂಗಲ ತಾಲ್ಲೂಕಿನ ಅನಿಗೋಳ ಗ್ರಾಮದ ಮಹಿಳೆಯ ಕುಟುಂಬದವರಿಗೆ ₹25 ಲಕ್ಷ ಪರಿಹಾರ ನೀಡಬೇಕು ಮತ್ತು ಕಿರುಕುಳ ನೀಡುತ್ತಿರುವ ಫೈನಾನ್ಸ್‌ಗಳ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆಯನ್ನು ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಜನ, ಕಿರುಕುಳ ನೀಡಿದ ಫೈನಾನ್ಸ್ ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಮಹಿಳೆ ಮನೆಗೆ ಪದೇಪದೇ ಭೇಟಿ ನೀಡಿ, ಮಾನಸಿಕ ಹಿಂಸೆ ನೀಡಿದ ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದೂ ಕಿಡಿ ಕಾರಿದರು.
ಮಹಿಳೆ ಮೂರು ಮೈಕ್ರೊ ಫೈನಾನ್ಸ್‌ಗಳಲ್ಲಿ ಕೇವಲ ₹5 ಲಕ್ಷ ಸಾಲ ಮಾಡಿದ್ದಾರೆ. ಮನೆಮನೆಗೆ ಬಂದು ಭೇಟಿ ನೀಡಿ ಗೋಗರೆದು ಸಾಲ ಕೊಡುವ ಫೈನಾನ್ಸ್‌ನವರು ಅದನ್ನು ತೀರಿಸಲು ಸಮಯ ಕೊಡುವುದಿಲ್ಲ. ಪದೇಪದೇ ಬಡ್ಡಿ ದರ ಹೆಚ್ಚಳ ಮಾಡುವುದು, ವಸೂಲಿಗೆ ಪೀಡಿಸುವುದು ಮುಂದುವರಿದೇ ಇದೆ. ಈಗಾಗಲೇ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಇದಕ್ಕೆ ಬಲಿಯಾಗಿದ್ದಾರೆ. ಆದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಹಿಂದೆ ತುಂಬು ಗರ್ಭಿಣಿ, ಹಸುಗೂಸು, ಬಾಣಂತಿ, ವೃದ್ಧರನ್ನು ಮನೆಯಿಂದ ಹೊರಗೆ ಹಾಕಿ ಬೀಗ ಜಡಿದ ಪ್ರಕರಣಗಳು ನಡೆದಿವೆ. ಕಾಕತಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಫೈನಾನ್ಸ್‌ಗಳ ಮುಷ್ಟಿಯಲ್ಲಿ ಸಿಕ್ಕು ಜನ ಒದ್ದಾಡುತ್ತಿದ್ದಾರೆ. ಹಲವರು ಊರು ತೊರೆದಿದ್ದಾರೆ. ಮಕ್ಕಳು ಶಾಲೆ– ಕಾಲೇಜು ಬಿಟ್ಟು ದುಡಿಯಲು ಹೋಗುವಂತಾಗಿದೆ ಎಂದೂ ಗೋಳು ಹೇಳಿಕೊಂಡರು.
ಆಯಾ ತಾಲ್ಲೂಕು ತಹಶೀಲ್ದಾರರು ಮೈಕ್ರೊ ಫೈನಾನ್ಸ್‌ನವರ ಸಭೆ ಕರೆದು ಕಿರುಕುಳ ನೀಡದಂತೆ ತಾಕೀತು ಮಾಡಬೇಕು. 2025ರಲ್ಲಿ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸಿ.ಎಂ ಸಿದ್ದರಾಮಯ್ಯ ಕಾನೂನು ಜಾರಿಗೊಳಿಸಿದರೂ ರೈತ ಮಹಿಳೆಯರ ಆತ್ಮಹತ್ಯೆಗಳು ನಿಲ್ಲದಾಗಿವೆ. ಕಳೆದ ದಿನ ಬೈಲಹೊಂಗಲದಲ್ಲಿ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೂ ಕ್ಯಾರೆ ಎನ್ನದ ಬೆಳಗಾವಿ ಜಿಲ್ಲಾಡಳಿತ ಇದೆಯೋ ಸತ್ತಿದೆಯೋ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಿರುಕುಳ ನೀಡಿದ ಫೈನಾನ್ಸ್‌ನವರ ಪರವಾನಗಿ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯರ್ಶಿ ಕಿಶನ್ ನಂದಿ, ಉಪಾಧ್ಯಕ್ಷ ಶಿವಾನಂದ ಮುಗಳಿಹಾಳ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಆಸ್ಮಾ ಜೂಟದಾರ, ರಾಷ್ಟ್ರೀಯ ನಾಯಕ ಪ್ರಕಾಶ ನಾಯಕ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.