
ಚಿಕ್ಕೋಡಿ: ಎಲ್ಲೂ ಇಲ್ಲದ ಗೊಂದಲವನ್ನು ಸೃಷ್ಠಿ ಮಾಡಲು ಏಕೆ ಹೊರಟಿದ್ದೀರಿ ಸಹೋದರರೇ..? ಕನ್ನಡಿಗರು ಮರಾಠಿಗರು ರಾಜ್ಯದಲ್ಲಿ ಸಹೋದರರಂತೆ ಸಹಬಾಳ್ವೆಯಿಂದ ಇದ್ದೇವೆ’ ಎಂದು ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ್ದ ಸಚಿವರು ಎಂಇಎಸ್ ಧೋರಣೆಗೆ ಕಿಡಿಕಾರಿದರು.
ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಲೋಕಸಭಾ ಸ್ಪೀಕರ್‌ಗೆ ದೂರು ನೀಡಿದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ’ರಾಜಕೀಯ ಉದ್ದೇಶದಿಂದ ಗೊಂದಲ ಸೃಷ್ಠಿ ಮಾಡಲು ಹೋಗಬೇಡಿ. ರಾಜ್ಯದಲ್ಲಿ ನಿಪ್ಪಾಣಿ, ಬೆಳಗಾವಿ ಸೇರಿದಂತೆ ಎಲ್ಲಿಯೂ ಗೊಂದಲ ಇಲ್ಲ. ಅಣ್ಣ ತಮ್ಮಂದಿರರಿಗಿಂತಲೂ ನಾವಿಲ್ಲಿ ಹೆಚ್ಚಾಗಿ ಅನ್ಯೋನ್ಯತೆಯಿಂದ ಇದ್ದೇವೆ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಯ ವಿರುದ್ಧ ಕಿಡಿಕಾರಿದರು.
ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸಭೆ ಮಾಡಿದ್ದಾರೆ. ಸಚಿವರೂ ಗೋಕಾಕ, ಚಿಕ್ಕೋಡಿ ಹಾಗೂ ಬೆಳಗಾವಿಯ ಜನರೊಂದಿಗೆ ಸಭೆ ಮಾಡಿದ್ದಾರೆ. ಚಿಕ್ಕೋಡಿ ಜಿಲ್ಲೆ ಘೋಷಣೆ ಇನ್ನೇನು ಬಹಳ ದಿನ ಹೋಗಲಿಕ್ಕಿಲ್ಲ. ಬೆಳಗಾವಿ ಜಿಲ್ಲೆ ವಿಭಜನೆ ಪ್ರಕ್ರಿಯೆ ಬೇಗ ಪ್ರಾರಂಭವಾಗಬಹುದು ಎಂಬ ಅಪೇಕ್ಷೆ ತಮ್ಮದಾಗಿದೆ" ಎಂದರು.
’ಮುಂಬೈ ಪ್ರಾಂತ್ಯವಿದ್ದ ಸಂದರ್ಭದಲ್ಲಿ ಧಾರವಾಡದಿಂದ ಕರಾರ್‌ವರೆಗೆ ಚಿಕ್ಕೋಡಿ ನ್ಯಾಯಾಲಯ ಹೊರತುಪಡಿಸಿ ಯಾವುದೇ ಕೋರ್ಟ್ ಇರಲಿಲ್ಲ. ಚಿಕ್ಕೋಡಿ ಪಟ್ಟಣದ ನ್ಯಾಯಾಲಯಕ್ಕೆ ಎರಡು ನೂರು ವರ್ಷಗಳ ಇತಿಹಾಸ ಇದೆ. ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ವಾದ ಮಂಡಿಸಿದ, ಬಿ.ಶಂಕರಾನಂದರಂತವರನ್ನು ಸಂಸದರನ್ನಾಗಿ ಕೊಟ್ಟ ಕೀರ್ತಿಯು ಈ ನ್ಯಾಯಾಲಯಕ್ಕೆ ಸಲ್ಲುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.