ADVERTISEMENT

ಬೆಳಗಾವಿ | ಶ್ರಮ, ನಿಷ್ಠೆಗೆ ಮತ್ತೊಂದು ಹೆಸರೇ ಬಂಜಾರರು: ಲಕ್ಷ್ಮೀ ಹೆಬ್ಬಾಳಕರ್‌

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 7:02 IST
Last Updated 17 ಫೆಬ್ರುವರಿ 2026, 7:02 IST
ಬೆಳಗಾವಿಯ ಕಲ್ಮೇಶ್ವರ ನಗರದ ಲಮಾಣಿ ತಾಂಡಾದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಮಹೋತ್ಸವದಲ್ಲಿ ಲಕ್ಷ್ಮೀ ಹೆಬ್ಬಾಳಕರ್‌ ಮಾತನಾಡಿದರು
ಬೆಳಗಾವಿಯ ಕಲ್ಮೇಶ್ವರ ನಗರದ ಲಮಾಣಿ ತಾಂಡಾದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಮಹೋತ್ಸವದಲ್ಲಿ ಲಕ್ಷ್ಮೀ ಹೆಬ್ಬಾಳಕರ್‌ ಮಾತನಾಡಿದರು   

ಬೆಳಗಾವಿ: ‘ಉರಿ ಬಿಸಿಲನ್ನು ಲೆಕ್ಕಿಸದೇ ಕೆಲಸ ಮಾಡುವ ಬಂಜಾರ ಸಮುದಾಯದವರು ಸ್ವಾಭಿಮಾನಿಗಳು. ನಿಷ್ಠೆ, ಪ್ರಾಮಾಣಿಕತೆ, ಪರಿಶ್ರಮಕ್ಕೆ ಮತ್ತೊಂದು ಹೆಸರೇ ಬಂಜಾರ ಸಮಾಜ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಇಲ್ಲಿನ ಕಲ್ಮೇಶ್ವರ ನಗರದ ಲಮಾಣಿ ತಾಂಡಾದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಬಂಜಾರ ಸಮಾಜದ ಯುವಕರು ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂಬುದೇ ನನ್ನ ಅಭಿಲಾಷೆ. ಇಂತ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಮಾಜದ ಮುಂದೆ ಬಂದಿದೆ ಎಂದು ನೀವೆಲ್ಲ ತೋರಿಸಿಕೊಟ್ಟಿದ್ದೀರಿ’ ಎಂದರು.

‘ಸಂತ ಸೇವಾಲಾಲ್‌ ಅವರು ಬಂಜಾರ ಸಮುದಾಯವನ್ನು ಎತ್ತರಕ್ಕೇರಿಸಬೇಕು ಎಂದು ಕನಸು ಕಂಡಿದ್ದರು. ಅವರೊಬ್ಬ ಪವಾಡ ಪುರುಷರಾಗಿದ್ದರು. ಬ್ರಿಟಿಷರು, ಮೈಸೂರು ಮಹಾರಾಜರ ವಿರುದ್ಧವೇ ಸಮಾಜಕೋಸ್ಕರ ಧ್ವನಿ ಎತ್ತಿದ್ದರು. ಇಂತ ಸಮಾಜ ಸುಧಾರಕನ ಕೆಲಸಗಳಿಂದ ಸ್ಫೂರ್ತಿ ಪಡೆದ ಹೈದರಾಬಾದ್‌ ನಿಜಾಮರು ಹೈದರಾಬಾದ್‌ನ ಪ್ರದೇಶವೊಂದಕ್ಕೆ ಬಂಜಾರ ಹಿಲ್ಸ್‌ ಎಂದು ಹೆಸರಿಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಸುರೇಶ ರಾಠೋಡ, ಆನಂದ ಪಮ್ಮಾರ, ಪ್ರಕಾಶ ರಾಠೋಡ, ಹಣಮಂತ ರಾಠೋಡ, ರಾಜು ರಾಠೋಡ, ರಾಮು ಪೂಜೇರಿ, ಬಸು ಪಮ್ಮಾರ, ಲಚ್ಚಪ್ಪ ಪಮ್ಮಾರ, ಅಪ್ಪು ಪಾಟೀಲ, ಮಂಜುನಾಥ ರಾಠೋಡ, ಮಾರುತಿ ಚೌಹಾಣ್‌ ಉಪಸ್ಥಿತರಿದ್ದರು.

ಬಂಜಾರ ಸಮುದಾಯದ ದೇವಸ್ಥಾನ ಕಟ್ಟಲು ₹30 ಲಕ್ಷ ದೇಣಿಗೆ ನೀಡದ್ದೇನೆ. ಸಮಾಜಕ್ಕೆ ಶಾಂತಿ ಮತ್ತು ಸನ್ಮಾರ್ಗವನ್ನು ತೋರಿದ ಮಹಾತ್ಮರ ವಿಚಾರಧಾರೆ ಸದಾ ಸ್ಫೂರ್ತಿ
ಲಕ್ಷ್ಮೀ ಹೆಬ್ಬಾಳಕರ್‌ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಮಹಾಪ್ರಸಾದ ವಿತರಣೆ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ವಿವಿಧೆಡೆ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಮಹಾಪ್ರಸಾದ ವಿತರಿಸಿದರು. ಹಿಂಡಲಗಾ ಜಯನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಲ್ಲಕ್ಕಿ ಪೂಜೆಯಲ್ಲಿ ಪಾಲ್ಗೊಂಡು ಭಕ್ತರೊಂದಿಗೆ ಸ್ವೀಕರಿಸಿದರು. ನಂತರ ಸಹ್ಯಾದ್ರಿ ನಗರದ ಶಿವಲಿಂಗೇಶ್ವರ ಕಾಲೊನಿಯ ಆದಿ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಪ್ರಸಾದ ಸೇವೆಗೆ ಸಹ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.