ADVERTISEMENT

‘ಭಿನ್ನಮತ ಶಮನ ಮಾಡಲೇಬೇಕಾಗಿದೆ’

ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 8:56 IST
Last Updated 26 ಡಿಸೆಂಬರ್ 2018, 8:56 IST
   

ಬೆಳಗಾವಿ: ‘ಸಚಿವ ಸಂಪುಟ ವಿಸ್ತರಣೆ ನಂತರ ಉಂಟಾಗಿರುವ ಭಿನ್ನಮತ ಶಮನ ಮಾಡಲೇಬೇಕಾಗಿದೆ. ಇದಕ್ಕಾಗಿ ಪಕ್ಷದ ಮುಖಂಡರೆಲ್ಲರೂ ಮುಂದಾಗಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ನಾನೂ ಮಾತನಾಡುತ್ತೇನೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬುಧವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಂಡುಕೋರರು ಯಾರೂ ಇಲ್ಲ. ಶಾಸಕರಾದ ರಾಮಲಿಂಗಾರೆಡ್ಡಿ ಅವರಾಗಲೀ, ಸುಧಾಕರ್ ಅವರಾಗಲೀ ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡಿದ್ದಾರೆಯೇ ಹೊರತು ಪಕ್ಷ ಬಿಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಅವರೆಲ್ಲರೊಂದಿಗೆ ಚರ್ಚಿಸಿ ಸಮಾಧಾನಪಡಿಸಲೇಬೇಕಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಸೇರಿದಂತೆ ಎಲ್ಲ ಕಾಂಗ್ರೆಸ್‌ ಶಾಸಕರೂ ನಮ್ಮೊಂದಿಗೆ ಹಾಗೂ ಪಕ್ಷದೊಂದಿಗೆ ಇದ್ದಾರೆ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ರಮೇಶ ಜಾರಕಿಹೊಳಿ‌ ಎಲ್ಲಿದ್ದಾರೆಂದು ಹುಡುಕಿ ಭೇಟಿ ಆಗಬೇಕಿದೆ. ಮಾತುಕತೆ ನಡೆಸಬೇಕಾಗಿದೆ. ಮೊದಲಿನಿಂದಲೂ ಅವರು ಇರುವುದೇ ಹಾಗೇ. ಸರಿಯಾಗಿ ಮಾತನಾಡುವುದಿಲ್ಲ. ಆದರೂ ಅವರನ್ನು ಭೇಟಿಯಾಗಿ, ರಾಜಕೀಯವಾಗಿ ಅವರಿಗೆ ಏನು ಹೇಳಬೇಕೋ ಅದನ್ನು ಹೇಳುವ ಪ್ರಯತ್ನ ಮಾಡುತ್ತೇನೆ. ಅವರಿಗೆ ಇನ್ನೂ ಫೋನ್ ಮಾಡಿಲ್ಲ. ಎಲ್ಲವನ್ನೂ ಸರಿ ಮಾಡಲು ಪ್ರಯತ್ನಿಸುತ್ತೇನೆ. ಅವರು ಯಾವುದೇ ಬೇಡಿಕೆ ಇಟ್ಟಿಲ್ಲ. ನನ್ನ ಮೇಲೆ ಅವರಿಗೆ ಮುನಿಸು ಇಲ್ಲ’ ಎಂದರು.

‘ನನಗೆ ಈವರೆಗೂ ಖಾತೆ ಹಂಚಿಕೆಯಾಗಿಲ್ಲ. ಇಂಥಾದ್ದೇ ಖಾತೆ ಬೇಕು ಎಂದು ವರಿಷ್ಠರ ಮುಂದೆ ಬೇಡಿಕೆ ಇಟ್ಟಿಲ್ಲ. ಬಿಜೆಪಿಯವರು ಆರು ತಿಂಗಳಿಂದಲೂ ಆಪರೇಷನ್ ಕಮಲದ ಬಗ್ಗೆ ಹೇಳುತ್ತಲೇ ಇದ್ದಾರೆ. ಅದರಲ್ಲಿ ಯಾವುದೇ ವಿಶೇಷವಿಲ್ಲ. ಯಾರೂ ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಮೇಶ ಜಾರಕಿಹೊಳಿ‌ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕು. ಸರಿಯಾಗಿ ಮಾತನಾಡುವುದನ್ನೂ ಕಲಿಯಬೇಕು. ಈ ಬಗ್ಗೆ ಹಿಂದೆ ಹಲವು ಬಾರಿ ನಾನು ಬಹಿರಂಗವಾಗಿಯೇ ಹೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.