ADVERTISEMENT

ಸೋಂಕಿತರಿಗೆ ಚಿಕಿತ್ಸೆ: ನಿರ್ಲಕ್ಷ್ಯ ವಹಿಸಬೇಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 17:02 IST
Last Updated 29 ಸೆಪ್ಟೆಂಬರ್ 2020, 17:02 IST

ಗೋಕಾಕ: ‘ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಕೋವಿಡ್–19 ಸೋಂಕಿತರ ಸುರಕ್ಷತೆಗಾಗಿ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ’ ಎಂದು ಕೆಎಂಎಫ್‌ ಅಧ್ಯಕ್ಷರೂ ಆದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸಭೆಯಲ್ಲಿ ದೂರವಾಣಿ ಮೂಲಕ ಮಾತನಾಡಿದ ಅವರು, ‘ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಕೊರೊನಾ ಇನ್ನೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸೋಂಕಿತರ ಆರೈಕೆಗಾಗಿ ಈ ತಾಲ್ಲೂಕುಗಳ ಮೂರು ಕಡೆ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಸೋಂಕಿತರ ಆರೈಕೆಗೆ ಒತ್ತು ನೀಡಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಗೋಕಾಕದ ಕೋವಿಡ್ ಆರೈಕೆ ಕೇಂದ್ರದಲ್ಲಿ 5 ಮತ್ತು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 2 ವೆಂಟಿಲೇಟರ್ ಅಳವಡಿಸಲು ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು’ ಎಂದು ಕೋರಿದರು.

ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ್ ದಿಲ್ಶಾದ ಮಹಾತ, ಡಾ.ಆರ್.ಎಸ್. ಬೆಣಚಿನಮರಡಿ, ಗೋಕಾಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತಸಹಾಯಕ ನಾಗಪ್ಪ ಶೇಖರಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.