ಕಾಗವಾಡ: ತಾಲ್ಲೂಕಿನ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಶನಿವಾರ ಕೂಡಾ ಏರಿಕೆಯಾಗಿದ್ದು, ನದಿ ತೀರದ ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳಿಗೆ ಕಾಗವಾಡ ಶಾಸಕ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ, ಸ್ಥಳೀಯ ಜನರಿಗೆ ಪ್ರವಾಹ ಪರಿಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಅಗತ್ಯ ಬಿದ್ದಲ್ಲಿ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ತಾಲ್ಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, 2005, 2019 ಮತ್ತು 2021 ಕ್ಕಿಂತ ಈಗಿನ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಗ್ರಾಮಸ್ಥರು ಭಯ ಪಡುವ ಅವಶ್ಯಕತೆ ಇರುವುದಿಲ್ಲ. ಮಹಾರಾಷ್ಟ್ರದ ಜಲಾಶಯದಿಂದ ಎಷ್ಟು ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ನಾಗರೀಕರು ಭಯ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಸರ್ಕಾರ, ಜಿಲ್ಲಾಡಳಿತದೊಂದಿಗೆ ನಾನು ಸಹ ನಿಮ್ಮ ಜೊತೆಗೆ ಇರುತ್ತೇನೆ. ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ್ ರಾಜೇಶ ಬುರ್ಲಿ, ಬಿಇಒ ಎಂ.ಆರ್. ಮುಂಜೆ, ಕಾಗವಾಡ ಪಿಎಸ್‌ಐ ಎಂ.ಬಿ. ಬಿರಾದಾರ, ಪಿಎಸ್‌ಐ (ಅಪರಾದ) ರಾಕೇಶ ಬಗಲಿ, ಜುಗೂಳ ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಮುಖಂಡರಾದ ಅಣ್ಣಾಸಾಬ ಪಾಟೀಲ, ಅನೀಲ ಕಡೋಲೆ, ಉಮೇಶ ಪಾಟೀಲ, ಅನೀಲ ಸುಂಕೆ, ವಿಜಯ ಅಗಸರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.