ಬೆಳಗಾವಿ: 'ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಗೂ ನನ್ನ ನಾಯಕ ಹಾಗೂ ಗುರು. ಆದರೆ,ಇತ್ತೀಚೆಗೆ ಅವರು ಬಹಳಷ್ಟು ಸುಳ್ಳು ಹೇಳುವುದನ್ನು ಕಲಿತಿದ್ದಾರೆ' ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಟೀಕಿಸಿದರು.
ಜಿಲ್ಲೆಯ ರಾಯಬಾಗದ ಮಹಾವೀರ ಭವನದಲ್ಲಿ ವಿಧಾನಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
'ವಿವೇಕರಾವ್ ಪಾಟೀಲ ಅವರಿಗೂ ಕಾಂಗ್ರೆಸ್ ಪಕ್ಷಕೂ ಸಂಬಂದವಿಲ್ಲ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಕೊಲ್ಹಾಪುರ ಮಹಾಲಕ್ಷ್ಮಿ ದೇವಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ವಿವೇಕರಾವ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಕಳೆದ ವಿಧಾನಪರಿಷತ್ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಟಿಕೆಟ್ ಕೂಡುವಂತೆ ಕೇಳಿಕೊಂಡಿದ್ದೆ. ಆದರೆ ವೀರಕುಮಾರ ಪಾಟೀಲ ಅವರಿಗೆ ಟಿಕೆಟ್ ನೀಡಿದರು. ಆಗ ವಿವೇಕರಾವ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡೆವು' ಎಂದು ತಿಳಿಸಿದರು.
'ವಿವೇಕರಾವ್ ನಮ್ಮ ಕಾಂಗ್ರೆಸ್ ಪರವಾಗಿ ಕೆಲಸ ಮಾಡುವಂತೆ ನೋಡಿಕೋ ಎಂದು ಸಿದ್ದರಾಮಯ್ಯ ನನ್ನ ಬಳಿ ಹೇಳಿದ್ದರು. ಅದರಂತೆ ಪಾಟೀಲ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಪರ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ಪರವಾಗಿ ಮತ ಹಾಕುವಂತೆ ಅವರಿಗೆ ಕಾಂಗ್ರೆಸ್‌ನಿಂದ ತಿಳಿವಳಿಕೆ ಪತ್ರವನ್ನೂ ನೀಡಲಾಗುತ್ತಿತ್ತು. ಈಗ ಸಿದ್ದರಾಮಯ್ಯ ಅದ್ಯಾವ ಒತ್ತಡಕ್ಕೆ ಸಿಲುಕಿ ಸುಳ್ಳು ಹೇಳುತ್ತಿದ್ದಾರೆಯೋ ಗೊತ್ತಿಲ್ಲ' ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.