ADVERTISEMENT

ಬೆಳಗಾವಿ: ಫೆಬ್ರುವರಿ 4ರಂದು ಬೆಸ್ತರ ಬೃಹತ್ ಸಮಾವೇಶ– ವಿಪ ಸದಸ್ಯ ಸಾಯಬಣ್ಣ ತಳವಾರ

ಅಂಬಿಗರ ಚೌಡಯ್ಯ ಜಯಂತಿ, ತಾನಾಜಿ ಮಾಲಸೂರೆ ಸ್ಮರಣೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:07 IST
Last Updated 31 ಜನವರಿ 2024, 16:07 IST
<div class="paragraphs"><p>ಸಾಯಬಣ್ಣ ತಳವಾರ</p></div>

ಸಾಯಬಣ್ಣ ತಳವಾರ

   

ಬೆಳಗಾವಿ: ‘ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಶ್ರಯದಲ್ಲಿ ನಗರದ ಸರ್ದಾರ್‌ ಮೈದಾನದಲ್ಲಿ ಫೆಬ್ರುವರಿ 4ರಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಹಾಗೂ ಸಮಾಜದ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಾಯಬಣ್ಣ ತಳವಾರ ಹೇಳಿದರು.

‘ಕೋಲಿ, ಕಬ್ಬಲಿಗ, ಬೆಸ್ತ ಮುಂತಾಗಿ ಎಲ್ಲ ಉಪನಾಮಗಳನ್ನೂ ಒಳಗೊಂಡು ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಮೂರು ದಶಕಗಳಿಂದ ಹೋರಾಟ ಮಾಡುತ್ತಲೇ ಬರಲಾಗಿದೆ. ಆದರೆ, ಯಾವುದೇ ಸರ್ಕಾರ ಇದೂವರೆಗೆ ಸ್ಪಂದಿಸಿಲ್ಲ. ಹೀಗಾಗಿ, ಈ ಬಾರಿಯ ಬೆಳಗಾವಿ ಸಮಾವೇಶದಲ್ಲಿ ಮಹತ್ವದ ಹೆಜ್ಜೆ ಇಡಲಾಗುವುದು’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕೋಳಿ ಸಮಾಜವು ತೀರ ಹಿಂದುಳಿದಿದೆ. ಇವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು, ದೇಶದ ಮೂಲ ನಿವಾಸಿಗಳು ಎಂದು ಬ್ರಿಟಿಷ್‌ ಸರ್ಕಾರವೇ ದಾಖಲೆ ನೀಡಿದೆ. ಸ್ವಾತಂತ್ರ್ಯ ಬಂದ ನಂತರ ಹಾಗೂ ಪ್ರಾಂತ್ಯಗಳು ಪುನರ್‌ ವಿಂಗಡಣೆಯಾದ ಬಳಿಕ ಬಂದ ಎಲ್ಲ ಆಯೋಗಗಳು ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದೇ ವರದಿ ನೀಡಿವೆ. ನಾಗನಗೌಡ ಆಯೋಗದ ವರದಿ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಕೂಡ ಇದನ್ನು ಪುಷ್ಟೀಕರಿಸಿವೆ. ಆದರೂ ಸರ್ಕಾರಗಳು ಈ ವರದಿಗಳನ್ನು ಪುರಸ್ಕಾರ ಮಾಡಿಲ್ಲ’ ಎಂದರು.

‘ನಮ್ಮೊಂದಿಗೇ ಇದ್ದ ಬೇಡರ, ನಾಯಕ ಇತರ ಪರ್ಯಾಯ ಪದಗಳ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಬೆಸ್ತರನ್ನು ಮಾತ್ರ ಇನ್ನೂ ಹೊರಗಿಟ್ಟಿದ್ದಾರೆ. ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣ’ ಎಂದರು.

‘ಈ ಬಾರಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಉದ್ದೇಶಿಸಲಾಗಿದೆ. ಸಮಾವೇಶದ ಮೂಲಕ ಸಮಾಜದಲ್ಲಿ ಸ್ವಾಭಿಮಾನದ ಕಿಡಿ ಹಚ್ಚಲಾಗುವುದು. ಸಾಂವಿಧಾನಿಕವಾಗಿ ನಮಗೆ ಸಿಗಬೇಕಾದ ಮೀಸಲಾತಿ ಪಡೆಯಲು ಕಾರ್ಯ ಯೋಜನೆ ರೂಪಿಸಲಾಗುವುದು. ಇದೊಂದು ರಾಜಕೀಯೇತರ ಸಮಾವೇಶ. ಪಕ್ಷಾತೀತವಾಗಿ ಎಲ್ಲ ನಾಯಕರೂ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಬೆಸ್ತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಇನ್ನೊಂದು ಸಮಾಜದವರು ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ. ನಮ್ಮ ಹೋರಾಟ ನ್ಯಾಯಸಮ್ಮತವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಧುಶ್ರೀ ಅಪ್ಪಾಸಾಹೇಬ ಪೂಜಾರಿ ಇದ್ದರು.

ಬೃಹತ್‌ ಮೆರವಣಿಗೆ

‘ಅಂಬಿಗರ ಚೌಡಯ್ಯ ಅವರ 904ನೇ ಜಯಂತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮಹಾನ್‌ ಸೇನಾನಿ ಆಗಿದ್ದ ತಾನಾಜಿ ಮಾಲಸೂರೆ ಅವರ ಪುಣ್ಯಸ್ಮರಣೆ ದಿನವೂ ಆಗಿದೆ. ಜನವರಿ 21ರಂದೇ ರಾಜ್ಯದ ಎಲ್ಲ ಕಡೆ ಚೌಡಯ್ಯನವರ ಜಯಂತಿ ಆಚರಿಸಲಾಗಿದೆ. ಆದರೆ, ಬೆಳಗಾವಿಯಲ್ಲಿ ಸಮಾಜದ ಸ್ವಾಭಿಮಾನದ ಸಮಾವೇಶ, ಬೃಹತ್‌ ಮೆರವಣಿಗೆ, ಜಾಗೃತಿ ಹಮ್ಮಿಕೊಳ್ಳಬೇಕು ಎಂಬ ಕಾರಣಕ್ಕೆ ಫೆ.4ರಂದು ಆಚರಿಸಲಾಗುತ್ತಿದೆ’ ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ, ಪತ್ರಕರ್ತ ದಿಲೀಪ್‌ ಕುರಂದವಾಡೆ ತಿಳಿಸಿದರು.

‘ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಕೋಟೆ ಕೆರೆಯಿಂದ ಸರ್ದಾರ್‌ ಮೈದಾನದವರೆಗೆ ಬೃಹತ್‌ ಮೆರವಣಿಗೆ ನಡೆಯಲಿದೆ. 2,000 ಶರಣೆಯರು ಪೂರ್ಣಕುಂಭ ಹೊತ್ತು ಸಾಗಲಿದ್ದಾರೆ. ಡೊಳ್ಳು, ಜಾಂಜ್‌ಪಥಕ್‌, ಕಂಸಾಳೆ, ಆನೆ ವೇಷ, ಕೀಲುಕುದುರೆ ಸೇರಿದಂತೆ ವಿವಿಧ ಗೊಂಬೆ ವೇಷಧಾರಿಗಳು ಕೂಡ ಮೆರವಣಿಗೆಗೆ ಕಳೆ ನೀಡಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.